ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕೂಲಿ ಪಾವತಿಗೆ ಪರ್ಸೆಂಟೇಜ್ ಆರೋಪ ; ಮೂವರು ನೌಕರರಿಗೆ ಕಾರಣ ಕೇಳಿ ನೋಟಿಸ್ ಜಾರಿ
ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ವೇತನ ಪಾವತಿಸಲು ಪರ್ಸೆಂಟೇಜ್‌ಗೆ ಬೇಡಿಕೆ ಇರಿಸಿರುವ ಆರೋಪದ ಮೇರೆಗೆ ಮೂವರು ನೌಕರರಿಗೆ ತಾಪಂ ಇಓ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದ್ದಾರೆ.
ಏತನ್ಮಧ್ಯೆ ಶುಕ್ರವಾರವೂ ತಾಪಂ ಕಚೇರಿ ಮುಂದೆ ಧರಣಿ ನಡೆಸಿದ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಅವರನ್ನು ಭೇಟಿಯಾದ ತಾಪಂ ಇಒ ನಿಂಗಪ್ಪ ಮಸಳಿ,ಸದರಿ ಕೂಲಿಕಾರರ ಹಣವನ್ನು ಮುಂದಿನ ಹಂತದ ಕೂಲಿ ಪಾವತಿ ಸಮಯದಲ್ಲಿ ಮಾಡುವಂತೆ ಎನ್.ಆರ್.ಇ.ಜಿ ತಾಂತ್ರಿಕ ಸಹಾಯಕರಿಗೆ ಸೂಚಿಸಲಾಗಿದೆ.
ಗ್ರಾಪಂ ಸದಸ್ಯರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.
ಎನ್.ಆರ್.ಇ.ಜಿ ಕೂಲಿಕಾರರ ವೇತನ ಪಾವತಿಗೆ ಪರ್ಸೇಂಟೇಜ್‌ಗೆ ಬೇಡಿಕೆ ಇಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಎನ್.ಆರ್.ಇ.ಜಿ ತಾಂತ್ರಿಕ ಸಹಾಯಕ ಶಂಕರಗೌಡ ಯಾಳವಾರ, ಟಿಐಇ ಉಮೇಶ ಕನ್ನಿ ಅವರನ್ನು ತಾಪಂ ಇಒ ನಿಂಗಪ್ಪ ಮಸಳಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಕೂಲಿಕಾರರ ಹಣ ಪಾವತಿ ಮಾಡಲು ಕೇಳಿದರೆ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದ್ದು ಮರುಕಳಿಸಿದರೆ ಮೇಲಧಿಕಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧರಣಿ ನಿರತ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಮಾತನಾಡಿ, ತಾಪಂ ಇಒ ಅವರು ಕೊಟ್ಟ ಭರವಸೆ ಮೇರೆಗೆ ಧರಣಿ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದು ಬಾಕಿ ಕೂಲಿ ಹಣ ಪಾವತಿಸದೇ ಇದ್ದರೆ ಮತ್ತೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ಗ್ರಾಪಂ ಸದಸ್ಯನ ಹೋರಾಟಕ್ಕೆ ಗ್ರಾಪಂ ಅಧ್ಯಕ್ಷೆ ನೈನಾ ಚವ್ಹಾಣ ಅವರು ಬೆಂಬಲಿಸಿದರು.
ಎನ್.ಆರ್.ಇ.ಜಿ ತಾಂತ್ರಿಕ ಸಹಾಯಕ ಶಂಕರಗೌಡ ಯಾಳವಾರ, ಟಿಐಇ ಉಮೇಶ ಕನ್ನಿ ಹಾಗೂ ಹುಲ್ಲೂರು ಗ್ರಾಪಂ ಪಿಡಿಒ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಗುತ್ತಿಗೆ ಆಧಾರದಲ್ಲಿ ಸೇವೆಯಲ್ಲಿರುವ ತಾಂತ್ರಿಕ ಸಹಾಯಕರು, ಎನ್.ಆರ್.ಇ.ಜಿ ಸಿಬ್ಬಂದಿ ಜನಪ್ರತಿನಿಧಿಗಳು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವ್ಯವಹರಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.