ಕೃಷ್ಣಾನದಿ ತಟದಲ್ಲಿ ಯೋಗೋತ್ಸವ ರಂಗು

Jun 25, 2025 - 04:11
 0
ಕೃಷ್ಣಾನದಿ ತಟದಲ್ಲಿ ಯೋಗೋತ್ಸವ ರಂಗು
ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಶಾಲಾ ಮಕ್ಕಳು ಯೋಗಾಭ್ಯಾಸದ ನಾನಾ ಭಂಗಿ ಅತ್ಯಾಕರ್ಷಕವಾಗಿ ಪ್ರದಶಿ೯ಸಿ ಗಮನ ಸೆಳೆದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಚಿಕ್ಕಪಡಸಲಗಿ : ಯೋಗಾಭ್ಯಾಸದ ವ್ಯಾಮೋಹ ಮನಭಾವದಲ್ಲಿ ಮೂಡಿಸಿಕೊಂಡು ಯೋಗ ಪ್ರಕ್ರಿಯೆಯಲ್ಲಿ ನಿತ್ಯ ತಲ್ಲಿನರಾದರೆ ಶರೀರದಲ್ಲಿ ಆರೋಗ್ಯಕರ ಬೆಳವಣಿಗೆ ಕಾಣಬಹುದು.ಯೋಗಕ್ಕೆ ಪ್ರಾಚೀನ ದಿವ್ಯಾಮೃತ ಮೌಲ್ಯವಿದೆ.ಈ ಕ್ರಿಯೆಗೆ ಸ್ವಯಂ ಪ್ರೇರಿತರಾಗಿ ಅಪ್ಪಿಕೊಂಡು ಮನ ಸೋತರೆ ಖಂಡಿತ ಸದೃಢವಾದ ಆರೋಗ್ಯ ಬಲ ಹೊಂದಲು ಸಾಧ್ಯ ಎಂದು ಚಿಕ್ಕಲಕ್ಕಿ ಕ್ರಾಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ,ಮುಕುಂದ ಕಾಂಬಳೆ ಅಭಿಪ್ರಾಯಿಸಿದರು.

         ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ 11ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

        ಯೋಗಕ್ಕೆ ಆಧ್ಯಾತ್ಮಿಕ ಲೇಪನವಿದೆ.ಪುರಾತನ ಇತಿಹಾಸವೂ ಇದೆ.ಆರೋಗ್ಯ ಪುಷ್ಟಿ ಪುಟಿದೇಳಿಸುವ ಶಕ್ತಿಯೂ ಹೊಂದಿದೆ.ಹೀಗಾಗಿ ಪತಂಜಲಿ ಋಷಿ ಮುನಿಗಳ ಕೊಡುಗೆಯ ಈ ಯೋಗ ಸಂಜೀವಿನಿ ಅಂದಿನಿಂದ ಇಂದಿನವರೆಗೂ ತನ್ನದೇ ಮೌಲ್ಯ ಉಳಿಸಿಕೊಂಡು ಆಧುನಿಕ ಯುಗದಲ್ಲಿಂದು ವ್ಯಾಪಕ ಜನಪ್ರಿಯತೆ ಮನ್ನಣೆ ಪಡೆಯುತ್ತಿದೆ ಎಂದರು.

        ದೈಹಿಕ ಭಾವನೆಗಳ ಸಮತೋಲನ ಹತೋಟೆಗೆ ಯೋಗ ಮಹತ್ತರ ಪಾತ್ರ ವಹಿಸುತ್ತದೆ. ಶಿಸ್ತಿನ ಆರೋಗ್ಯ ಕ್ರಮಕ್ಕೆ ಇದು ಯೋಗ್ಯವಾಗಿದೆ.ಉತ್ತಮ ಜೀನನಾಧಾರಿತ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ.ಯೋಗಾಭ್ಯಾಸ ಲವಲವಿಕೆಯ ಭಾಸದೊಂದಿಗೆ ನಮ್ಯತೆ ಭಾವ ಅರಳಿಸುತ್ತದೆ.ಹೊಸತನದ ಅನುಭೂತಿ ಸೃಜಿಸುತ್ತದೆ ಎಂದು ಯೋಗದ ಮಹತ್ವ, ಮಹಿಮೆ ಸಾರಿದರು.

      ದೇಹ,ಮನಸ್ಸು, ಆತ್ಮ ಸಂಧಿಸುವ ಯೋಗಾಭ್ಯಾಸಕ್ಕೆ ಎಲ್ಲರೂ ಅಣಿಗೊಳ್ಳಬೇಕು. ಯೋಗ, ವ್ಯಾಯಾಮ, ದೇಹ ದಂಡಿನ ಕಸರತ್ತು ಇಂದು ಅತ್ಯಗತ್ಯ.ದೇಹದಲ್ಲಿನ ಕ್ರಿಯೆಗಳ ಸರಾಗ ಸಂಚಲನಕ್ಕೆ ಯೋಗ ಪ್ರೇರೇಪಿಸುತ್ತದೆ. ಒತ್ತಡ ಮುಕ್ತ ಜೀವನಕ್ಕೆ ಸಹಕಾರಿಯಾಗಿದೆ. ದೈನಂದಿನ ಜೀವನದಲ್ಲಿ ದಿನಕ್ಕೊಂದು ಬಾರಿಯಾದರೂ ಯೋಗ, ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯವಶ್ಯಕ ಎಂದು ಡಾ.ಮುಕುಂದ ಕಾಂಬಳೆ ಅಭಿಪ್ರಾಯಪಟ್ಟರು.

       ಪ್ರಭಾರ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ಯೋಗ ದಿನದಂದು ಮಾತ್ರ ಯೋಗ ಕುರಿತು ಪ್ರೀತಿ, ಕಾಳಜಿ ತೋರುವುದು ಸರಿಯಲ್ಲ.ನಿತ್ಯವೂ ದೇಹ, ಶರೀರವು ಯೋಗಾನಂದದಲ್ಲಿ ತೇಲಬೇಕು.ಯೋಗಾಭ್ಯಾಸದ ಜೊತೆಗೆ ಉತ್ತಮ ಹವ್ಯಾಸಗಳು ಮೈಗೂಡಿಸಿಕೊಂಡು ಯುವ ಜನತೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

    ಯೋಗ ಜೀವ ಸೆಲೆಯ ಮಂತ್ರವಾಗಿದೆ. ಆತ್ಮವಿಶ್ವಾಸ, ಮಾನಸಿಕ ಸ್ಥಿರತೆ, ದೇಹಬಲ,ಆರೋಗ್ಯ ಭಾಗ್ಯ,ಹೊಸತು ಚೈತನ್ಯ ಯೋಗದಿಂದ ಪಡೆಯಲು ಸಾಧ್ಯ ಎಂದರು.

        ಯೋಗ ಚಟುವಟಿಕೆಗಳನ್ನು ನಡೆಸಿಕೊಟ್ಟ ವಿಶ್ರಾಂತ ದೈಹಿಕ ಶಿಕ್ಷಕ ಬಸವರಾಜ ಅನಂತಪೂರ, ಶಾಲಾ ಮಕ್ಕಳು ನಿತ್ಯ ಬೆಳಿಗ್ಗೆ ಬೇಗನೆ ಎದ್ದೆಳುವ ಮನಸ್ಥಿತಿ ಇರಿಸಿಕೊಂಡು ಯೋಗ,ವ್ಯಾಯಾಮ ಕೈಗೊಳ್ಳಲು ಮುಂದಾಗಬೇಕು.ಓದಾಭ್ಯಾಸಕ್ಕೂ ಯೋಗ ಉತ್ತೇಜಿಸುತ್ತದೆ ಎಂದರು.

    ಶಿಕ್ಷಕ ಸುರೇಶ ಸಂತಿ, ಖಿನ್ನತೆ,ಆತಂಕ,ಒತ್ತಡ ತಗ್ಗಿಸಲು ಯೋಗ ಮದ್ದು.ಸ್ಮರಣ ಶಕ್ತಿ, ಏಕಾಗ್ರತೆ ವೃದ್ಧಿಸುತ್ತದೆ.ದೈಹಿಕ ಆರೋಗ್ಯ ಸುಸ್ಥಿರ ನಿಯಂತ್ರಿಸುತ್ತದೆ.ನೆಮ್ಮದಿ, ಶಾಂತಿ ಪ್ರಸನ್ನ ಭಾವ ಯೋಗದಿಂದ ನಮಗೆ ಲಭ್ಯ ಎಂದರು.

     ಮಡಿವಾಳ ಮಾಚಿದೇವ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ರಾಯಪ್ಪ ಸಣಮನಿ, ಶಿವಶರಣ ಹರಳಯ್ಯ ಸ್ಮಾರಕ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಎಸ್.ಅರಬಳ್ಳಿ, ಎಸ್.ಜಿ.ಬಾಳೇಕುಂದ್ರಿ ಆಂಗ್ಲ ಮಾದ್ಯಮ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಾಲಾ ಕಲ್ಯಾಣಿ ಸೇರಿದಂತೆ ಜೆಟಿವಿಪಿ ಅಂಗ ಸಂಸ್ಥೆಗಳ ಶಾಲಾ, ಕಾಲೇಜುಗಳ ಸಿಬ್ಬಂದಿಗಳಾದ ಸದಾಶಿವ ಹೊಸಮನಿ, ಸದಾಶಿವ ಬೋದ್ಲಿ, ಮಲ್ವಯ್ಯ ಮಠಪತಿ, ಹಣಮಂತ ಗದಿಗೆಪ್ಪಗೋಳ, ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಸಹನಾ ಹತ್ತಳ್ಳಿ (ಕಲ್ಯಾಣಿ), ಶೋಭಾ ಹಿರೇಮಠ, ಸುನಂದಾ ಬಬಲಾದಿಮಠ, ಭಾಗ್ಯಶ್ರೀ ವಿಭೂತಿಮಠ, ಚಂಪಾ ದಯಗೊಂಡ, ರೇಶ್ಮಾ ಕನಾಳ, ರೇಣುಕಾ ಲಾಳಸಂಗಿ, ಪೂಜಾ ಜಾಡರ, ಅಶ್ವಿನಿ ಕಲ್ಯಾಣಿ, ಮಾಲಾ ಯಣಗಾಯಿ, ಶಾಂತಾ ರೋಣಿಹಾಳ, ಲಕ್ಕವ್ವ ಸವದಿ, ಕಸ್ತೂರಿ ಪಟ್ಟಣಶೆಟ್ಟಿ, ಶಾಯಿನ್ ಗೆಣ್ಣೂರ ಇತರರಿದ್ದರು.

   ಶೃತಿ ಲಿಗಾಡೆ ಪ್ರಾಸ್ತಾವಿಕ ಮಾತನಾಡಿದರು. ವಾಣಿಶ್ರೀ ಸೌಧಿ, ಸಿದ್ಧಾರ್ಥ ಬಿಇಡಿ ಕಾಲೇಜಿನ ಪ್ರಶಿಕ್ಷಣಾಥಿ೯ಗಳು ದಿನದ ಮಹತ್ವ ಕುರಿತು ಮಾತನಾಡಿದರು. ಸುರೇಶ ಸಂತಿ ನಿರೂಪಿಸಿದರು. ಬಸವರಾಜ ಅನಂತಪುರ ಸ್ವಾಗತಿಸಿದರು, ಕುಮಾರ್ ವಾಣಿ ವಂದಿಸಿದರು.

   ನಿವೃತ್ತ ದೈಹಿಕ ಶಿಕ್ಷಕ ಬಸವರಾಜ ಅನಂತಪೂರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಏಕಕಾಲದಲ್ಲಿ ಅತ್ಯಂತ ಶಿಸ್ತು ಬದ್ಧ ಲಯದಿಂದ ಸಾಮೂಹಿಕವಾಗಿ ಯೋಗಾಸನದ ಹಲವಾರು ಆಸನಗಳನ್ನು ಮಾಡಿ ಗಮನ ಸೆಳೆದರು. ಯೋಗ ಚಟುವಟಿಕೆಗಳ ರಮ್ಯ, ವಿಹಂಗಮ ನೋಟ ದ್ರೋಣ ಕ್ಯಾಮರಾದಲ್ಲಿ ಸೆರೆಯಾಗಿ ನೋಡುಗರ ಕಣ್ಮನ ತಣಿಸಿದ್ದು ವಿಶೇಷ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.