ಭೀಮಾತೀರದಲ್ಲಿ ರೌಡಿಶೀಟರ್ ಹತ್ಯೆ : ರಕ್ತದ ಮಡುವಿನಲ್ಲಿ ಹಂತಕ ಬಾಗಪ್ಪನ ಶಿಷ್ಯ ಸುಶೀಲ್ ಕಾಳೆ
ಹಂತಕರ ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ | ಬೆಚ್ಚಿಬಿದ್ದ ಗುಮ್ಮಟನಗರಿ ಜನ | ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಾಳೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಭೀಮಾತೀರದ ಕುಖ್ಯಾತಿಯ ವಿಜಯಪುರದಲ್ಲಿ ರೌಡಿಶೀಟರ್ ಹತ್ಯೆ ಜನರನ್ನ ಬೆಚ್ಚಿಬೀಳಿಸಿದೆ. ಒಂದು ಸಮಯದಲ್ಲಿ ಹಂತಕ ಬಾಗಪ್ಪ ಹರಿಜನನ ಸಹಚರನಾಗಿದ್ದ ನರ್ಸ್ ಈಗ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಇತ್ತೀಚೆಗೆ ಬಾಗಪ್ಪನ ಹತ್ಯೆ ಬಳಿಕ ಈಗ ಆಪ್ತನ ಹತ್ಯೆ ಹಲವು ಅನುಮಾನಗಳನ್ನ ಮೂಡಿಸಿದೆ.
ಸುಶೀಲ್ ಕಾಳೆ ವಿಜಯಪುರ ನಗರದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಹಾಗಂತ ಈತ ಸಾಮಾನ್ಯದವನಲ್ಲ. ಒಂದು ಸಮಯದಲ್ಲಿ ಭೀಮಾತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ ಸಹಚರ ಆಗಿದ್ದ. ಆದರೆ ಅದೇನಾಗಿತ್ತು ಗೊತ್ತಿಲ್ಲ, ಬಾಗಪ್ಪನಿಂದ ದೂರವಾಗಿ ಫೈನಾನ್ಸ್ ಕೆಲಸ ಅಂತ ಓಡಾಡಿಕೊಂಡಿದ್ದ. ಆದರೆ ಸೋಮವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ನಾಲ್ಕು ಜನರ ಗುಂಪು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬಾಗಪ್ಪನ ನಂತರ ಬಾಗಪ್ಪನ ಶಿಷ್ಯ ಸುಶೀಲ್ ಕಾಳೆಯ ಹತ್ಯೆ ವಿಜಯಪುರದ ನಗರದಲ್ಲೆ ನಡೆದಿರೋದು ಜನರನ್ನ ಬೆಚ್ಚಿ ಬೀಳಿಸಿದೆ. ಇನ್ನೂ ಬಾಗಪ್ಪನ ಹತ್ಯೆಯಾಗಿ ೩ ತಿಂಗಳು ಕಳೆದಿಲ್ಲ, ಅಷ್ಟರಲ್ಲೆ ಆತನ ಹಳೆ ಶಿಷ್ಯನ ಬರ್ಬರ ಹತ್ಯೆ ಆಗಿದ್ದು ಹಲವು ಅನುಮಾನಗಳನ್ನ ಮೂಡಿಸಿದೆ.
ಅಂದಹಾಗೇ ಸುಶೀಲ್ ಕಾಳೆ ಭೀಮಾತೀರದಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಪೈಕಿ ಕಳೆದ ೨೦೧೪ ಅಗಸ್ಟ್ ೨೩ ರಂದು ವಿಜಯಪುರ ನಗರದಲ್ಲಿ ನಡೆದಿದ್ದ ಬಸ್ ಕಂಡಕ್ಟರ್ ಸುರೇಶ ಲಾಳಸಂಗಿ ಕೊಲೆ ಪ್ರಕರಣದಲ್ಲು ಈತ ಪ್ರಮುಖ ಆರೋಪಿಯಾಗಿದ್ದ.
ಭಾರತೀಯ ಶಸ್ತ್ರಾಸ್ತ ಕಾಯ್ದೆ ಅಡಿಯಲ್ಲು ಈತನ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಈತನ ಮೇಲೆ ರೌಡಿಶೀಟ್ ಕೂಡ ಒಪನ್ ಮಾಡಲಾಗಿತ್ತು. ಈ ಕೊಲೆಯ ಹಿಂದೆ ಫೈನಾನ್ಸ್ ಹಣ ಕಾರಣ ಎನ್ನಲಾಗಿದೆ.
ಇನ್ನೂ ಬಾಗಪ್ಪ ಹತ್ಯೆ ಮಾಡಿದ ಆರೋಪಿಗಳಿಗೆ ಸಹಾಯ ಮಾಡಿದ್ದಕ್ಕೆ ಹತ್ಯೆ ಎನ್ನುವ ಮಾತುಗಳು ಇವೆ ಎನ್ನಲಾಗಿದೆ. ಇನ್ನು ಈತ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಸುತ್ತಿದ್ದ ಡ್ಯಾನ್ಸ್ ಬಾರ್ ವಿಚಾರವಾಗಿ ತಕರಾರುಗಳಿದ್ದವು ಎನ್ನಲಾಗಿದೆ. ಹೀಗಾಗಿ ಹತ್ಯೆಯ ಬಗ್ಗೆ ಪೊಲೀಸರ ತನಿಖೆ ಚುರುಕುಗೊಳಿಸಿದ್ದಾರೆ.
ಸ್ಥಳಕ್ಕೆ ಗಾಂಧಿ ಚೌಕ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ವಿಜಯಪುರ ಖಾಕಿ ಪಡೆ ಘಟನೆ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದು, ಹಂತಕರ ಬಂಧನಕ್ಕೆ ಬಲೆ ಬಿಸಿದ್ದಾರೆಂದು ಪತ್ರಿಕೆ ಸತ್ಯ ಶೋಧನಾ ತಂಡಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಾಲ್ವರಿಂದ ಹಲ್ಲೆ :
ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ನಗರದ ಎಸ್. ಎಸ್. ರಸ್ತೆಯ ಎಸ್. ಎಸ್. ಕಾಂಪ್ಲೆಕ್ಸ್ ನಲ್ಲಿ ಇರುವ ಅಮರ ವರ್ಷಿಣಿ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ. ಸುಶೀಲ್ ಕಾಳೆ (೪೩) ಕೊಲೆಗೀಡಾದ ಯುವಕ. ಬ್ಯಾಂಕಿನಲ್ಲಿದ್ದ ಈ ಯುವಕನ ಮೇಲೆ ಮಾರಾಕಸ್ತ್ರಗಳಿಂದ ನಾಲ್ವರು ಹಲ್ಲೆ ಮಾಡಿದ್ದು ತೀವ್ರವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ನಗರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಕಾಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.