ಆಲಮಟ್ಟಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ಯೋಗ ಕಲರವ : ಯೋಗ ಕಸರತ್ತಿನಲ್ಲಿ ಮಿಂದ ಗುರು-ಶಿಷ್ಯರು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮಟ್ಟಿ : ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಶನಿವಾರ ಇಲ್ಲಿನ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಯೋಗಾಭ್ಯಾಸದ ಕಲರವ ಜೋರಾಗಿತ್ತು.
ಗುರು ಬಳಗ ಹಾಗೂ ಶಿಷ್ಯರ ಸಮೂಹ ಸಾಮೂಹಿಕವಾಗಿ ಯೋಗ ವ್ಯಾಯಾಮದ ಕಸರತ್ತು ಪ್ರದರ್ಶಿಸಿ ಗಮನ ಸೆಳೆದರು. ವಿವಿಧ ಸ್ತರದ ಯೋಗ ನಯನದಲ್ಲಿ ಮಿಂದು ಬೆವರು ಹರಿಸಿದರು.ಶಿಕ್ಷಕರ ಹಾಗೂ ಮಕ್ಕಳ ಯೋಗಾ ಭಂಗಿಯ ನೋಟಗಳು ಕಣ್ಮನ ಸೆಳೆದು ಹೃನ್ಮನ ತಣಿಸಿದವು. ಯೋಗದ ಆಯಾಮಗಳಿಗೆ ಮೈ ಶರೀರವೊಡ್ಡಿ ನಲುವಿನ ಭಾವದೊಂದಿಗೆ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಮಕ್ಕಳು ಯೋಗ ಪ್ರಜೆ ಬೆಳೆಸಿಕೊಂಡಲ್ಲಿ ಸುಸ್ಥಿರ ಆರೋಗ್ಯ ಕಾಪಾಡಿಕೊಳ್ಳ ಬಹುದು. ಆ ಹಿನ್ನೆಲೆಯಲ್ಲಿ ಯೋಗ ಪ್ರೀತಿಯಡೆಗೆ ಒಲವು ತೋರಬೇಕು ಎಂದರು.
ಯೋಗ ಯುಕ್ತ ಜೀವನದಲ್ಲಿ ಉಲ್ಲಾಸಮಯ ಇದೆ.ಉತ್ತುಂಗ ಭಾವಮನ ಅರಳಿಸುವ ದಿವ್ಯತೆ ಯೋಗದಲ್ಲಿದೆ.ನಿತ್ಯ ಯೋಗಾಭ್ಯಾಸದಲ್ಲಿ ನಿರತರಾದರೆ ಮಾನಸಿಕ ಒತ್ತಡ ಕಾಯ್ದುಕೊಂಡು ಮನೋಬಲ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.
ಇಂದಿನ ಒತ್ತಡದ ಜೀವನದಲ್ಲಿ ಯೋಗ,ವ್ಯಾಯಾಮಕ್ಕೆ ಎಲ್ಲರೂ ಮಹತ್ವ ಕೊಡಬೇಕು.ಉತ್ತಮ ಆರೋಗ್ಯ ಭಾಗ್ಯಕ್ಕೆ ಯೋಗ ಮನೆ ಮದ್ದು ಮಾಡಿಕೊಳ್ಳಬೇಕು. ಔಷಧೀಯ ಮೇಲೆ ಅವಲಂಬಿತರಾಗದೆ ಯೋಗಾಭ್ಯಾಸಕ್ಕೆ ಮಣೆ ಹಾಕಬೇಕು.ಯೋಗ ಉತ್ಸಾಹ, ಹರುಷ,ಲವಲವಿಕೆಯ ಭಾವ ಮೂಡಿಸುತ್ತದೆ.ನಮ್ಮ ಸವಾ೯ಂಗೀಣ ಉನ್ನತಿಗೆ ಪೂರಕವಾಗಿದೆ ಎಂದರು.
ಯೋಗಾಭ್ಯಾಸ ನಡೆಸಿಕೊಟ್ಟ ದೈಹಿಕ ಶಿಕ್ಷಕ ಎಸ್.ಎಚ್.ನಾಗಣಿ ಮಾತನಾಡಿ, ಇಂದು ಜಗತ್ತಿನಾದ್ಯಂತ ಯೋಗಶಾಸ್ತ್ರ ಮೊಳಗುತ್ತಿದೆ. ಬಾಹ್ಯ ಚೇತನ ಅರಳಿಸಬಲ್ಲ ಯೋಗ ಆತ್ಮಸಾಷ್ಕಾರಕ್ಕೆ ನವಭಾಷ್ಪದೊಂದಿಗೆ ಉತ್ತೇಜನ ನೀಡುತ್ತದೆ. ದೈಹಿಕ ಕಸರತ್ತು,ವ್ಯಾಯಾಮ, ಧ್ಯಾನ,ಯೋಗ ಶರೀರಕ್ಕೆ ಸಂಜೀವಿನಿಯಾಗಿದೆ. ಆರೋಗ್ಯ ಭರಿತ ಸಂಪತ್ತಿಗೆ ಸಹಕಾರಿಯಾಗಿದೆ. ಆ ದಿಸೆಯಲ್ಲಿ ಪ್ರತಿಯೊಬ್ಬರೂ ಯೋಗ ಒಲವು ಹೊಂದಿ ಜೀವನದಲ್ಲಿ ಆರೋಗ್ಯ ಗೆಲುವು ಕಾಣಬೇಕು ಎಂದರು.
ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಮಾತನಾಡಿ, ಆಧುನಿಕ ಜೀವನಶೈಲಿ ಆರೋಗ್ಯಕ್ಕೆ ಮಾರಕವಾಗಿದೆ.ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದ ಪಿಡುಗು ಯುವಜನತೆಯಲ್ಲಿ ಹೆಚ್ಚಾಗಿದೆ. ವೈವಿಧ್ಯತೆ ಮನು ಜೀವ ಹುಚ್ಚುತನದ ಭರಾಟೆಯಲ್ಲಿಂದು ಆರೋಗ್ಯ ಹದಗೆಡಿಸಿಕೊಂಡು ನರಳಾಡುವಂತಾಗಿದೆ. ಈ ಬಗ್ಗೆ ಸೂಕ್ಷ್ಮ ಲಕ್ಷ ಹರಿಸಬೇಕು. ಸಾಧ್ಯವಾದಷ್ಟು ಆಸ್ಪತ್ರೆ, ಔಷಧಕ್ಕೆ ಮಾರು ಹೋಗುವ ಬದಲು ಯೋಗ,ವ್ಯಾಯಾಮವನ್ನೇ ಕ್ರಮಬದ್ಧವಾಗಿ ಅಳವಡಿಸಿಕೊಂಡು ಆರೋಗ್ಯಕರ ದೇಹ ಕಾಪಾಡಿಕೊಳ್ಳಲು ಮುಂದಾಗಬೇಕು. ಉಲ್ಲಾಸಿತ ಮನಸ್ಸು, ಬೌದ್ಧಿಕ ಕ್ಷಮತೆ ಕಂಡುಕೊಳ್ಳಬೇಕು ಇದಕ್ಕೆಲ್ಲ ಯೋಗವೇ ಯೋಗ್ಯ ಎಂದರು.
ಶಿಕ್ಷಕರಾದ ಗುಲಾಬಚಂದ ಜಾಧವ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ವಿಶ್ರಾಂತ ಕರುಣಿಕ ಶಾಂತೂ ತಡಸಿ, ಸಚೀನ ಹೆಬ್ಬಾಳ, ಗೋಪಾಲ ಬಂಡಿವಡ್ಡರ, ಸಿದ್ದು ಪಟ್ಟಣಶೆಟ್ಟಿ, ಅಕ್ಷರ ದಾಸೋಹದ ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ ಇತರರಿದ್ದರು.