ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಎಸ್ಪಿ ನಿಂಬರಗಿ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ.
ಒಟ್ಟು 39 ಕೆ.ಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳ ವಶ .
1.16 ಕೋಟಿ ರೂ. ಹಣ ವಶ.
ನ್ಯಾಯಾಲಯಕ್ಕೆ ಆರೋಪಿಗಳ ಹಾಜರು.
ಆರೋಪಿಗಳಿಂದ 5 ಕಾರುಗಳು (2 ಇನ್ನೊವಾ, 1 ರೆನಾಲ್ಟ್, 1 ಕೀಯಾ, 1 ಸ್ವಿಪ್ಟ್) ವಶ.
10 ಕೋಟಿ 75 ಲಕ್ಷ ರೂ. ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಕರಗಿಸಿದ ಬಂಗಾರದ ಗಟ್ಟಿ ವಶ.
ಒಟ್ಟು 53,31,20,450/- ಕೋಟಿ ರೂ. ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು.
ವಿಜಯಪುರ : ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ೧೫ ಜನ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು ಮೇ ೨೩ ರಂದು ೦೭ ಗಂಟೆಯಿಂದ ಮೇ ೨೫/೨೦೨೫ ರ ಬೆಳಿಗ್ಗೆ ೧೧.೩೦ ಗಂಟೆಯ ನಡುವಿನ ಅವಧಿಯಲ್ಲಿ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಯಾರೋ ಕಳ್ಳರು ಬ್ಯಾಂಕ್ ನ ಕಿಟಕಿಯ ಸರಳುಗಳನ್ನು ಕಟ್ ಮಾಡಿ ಒಳಹೊಕ್ಕು, ಬ್ಯಾಂಕ್ ಸೇಫ್ ಲಾಕರ್ ರೂಮ್ ನ ಗ್ರಿಲ್ ನ ಸರಳುಗಳನ್ನು ಕಟ್ ಮಾಡಿ ಬೆಂಡ್ ಮಾಡಿ ಒಳ ಹೊಕ್ಕು, ಲಾಕರ್ ನಲ್ಲಿದ್ದ ಅಂದಾಜು ೫೩.೨೬ ಕೋಟಿ ರೂ. ಮೌಲ್ಯದ ೫೮.೯೭ ಕೆ.ಜಿ (೫೮,೯೭೬.೯೪ ಗ್ರಾಂ.) ಬಂಗಾರದ ಆಭರಣಗಳು ಹಾಗೂ ನಗದು ಹಣ ರೂ. ೫,೨೦,೪೫೦/- ಹೀಗೆ ಒಟ್ಟು ೫೩,೩೧,೨೦,೪೫೦/- ಕೋಟಿ ರೂ. ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲದೇ ತಮ್ಮ ಗುರುತು ಪತ್ತೆ ಆಗದಂತೆ ಬ್ಯಾಂಕಿನಲ್ಲಿರುವ ಸಿ.ಸಿ.ಟಿ.ವ್ಹಿ ಕ್ಯಾಮೆರಾಗಳ ಎನ್.ವಿ.ಆರ್ ಸಹ ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ದಿನಾಂಕ: ೨೬.೦೫.೨೦೨೫ ರಂದು ಮನಗೂಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: ೬೯/೨೦೨೫ ಕಲಂ: ೩೩೧(೩), ೩೩೧(೪), ೩೦೫(ಇ) ಬಿ.ಎನ್.ಎಸ್-೨೦೨೩ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಎಂದಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ೦೩ ಜನ ಆರೋಪಿತರಾದ ಹುಬ್ಬಳ್ಳಿಯ ಧಾರವಾಡ ಮೂಲದವರಾದ ವಿಜಯಕುಮಾರ ಮೋಹನರಾವ ಮಿರಿಯಾಲ, ೪೧ ವರ್ಷ, ಸೀನಿಯರ್ ಮ್ಯಾನೇಜರ್ ಕೆನರಾ ಬ್ಯಾಂಕ್, ಚಂದ್ರಶೇಖರ ಕೊಟಿಲಿಂಗಮ್ ನೆರೆಲ್ಲಾ, ೩೮ ವ, ಸುನೀಲ ನರಸಿಂಹಲು ಮೋಕಾ, ೪೦ ವರ್ಷ, ಇವರುಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧನಕ್ಕೊಳಗಾದ ಆರೋಪಿಗಳಿಂದ ಅಂದಾಜು ೧೦ ಕೋಟಿ ೭೫ ಲಕ್ಷ ರೂ. ಮೌಲ್ಯದ ೧೦.೫ ಕೆ.ಜಿ ಬಂಗಾರದ ಆಭರಣ ಹಾಗೂ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳ ಪತ್ತೆಗೆ ಎಸ್ಪಿ ನೇತೃತ್ವದಲ್ಲಿ ೧೦೦ ಸಿಬ್ಬಂದಿಗಳು, ೦೮ ವಿಶೇಷ ತಂಡ ರಚನೆ :
ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಅವರ ಮಾರ್ಗದರ್ಶನದಲ್ಲಿ, ಡಿ.ಎಸ್.ಪಿ ಟಿ.ಎಸ್.ಸುಲ್ಪಿ, ಸುನೀಲ ಕಾಂಬಳೆ, ಬಲ್ಲಪ್ಪ ನಂದಗಾವಿ, ಸಿಪಿಐಗಳಾದ ರಮೇಶ ಅವಜಿ, ಗುರುಶಾಂತ ದಾಶ್ಯಾಳ, ಅಶೋಕ ಚವ್ಹಾಣ, ಪಿಎಸ್‌ಐಗಳಾದ ಶ್ರೀಕಾಂತ ಕಾಂಬಳೆ, ಅಶೋಕ ನಾಯಕ, ದೇವರಾಜ ಉಳ್ಳಾಗಡ್ಡಿ, ಬಸವರಾಜ ತಿಪ್ಪರೆಡ್ಡಿ, ರಾಕೇಶ ಬಗಲಿ, ಸೊಮೇಶ ಗೆಜ್ಜಿ, ವಿನೋದ ದೊಡಮನಿ, ವಿನೋದ ಪೂಜಾರಿ, ಶಿವಾನಂದ ಪಾಟೀಲ, ಯತೀಶ ಕೆ, ಶ್ರೀಮತಿ ನಾಗರತ್ನ ಉಪ್ಪಲದಿನ್ನಿ ಹಾಗೂ ಸುಮಾರು ೧೦೦ ಸಿಬ್ಬಂದಿ ಗಳನ್ನೊಳಗೊಂಡ ೦೮ ವಿಶೇಷ ತಂಡಗಳನ್ನು ಆರೋಪಿತರ ಪತ್ತೆ ಕುರಿತು ರಚಿಸಲಾಗಿತ್ತು.
ಪೊಲೀಸ್ ಅಧಿಕಾರಿಗಳ ಸಿಬ್ಬಂದಿಗಳ ಕಾರ್ಯ ಶ್ಲಾಘಿಸಿದ ಐಜಿಪಿ, ಎಸ್ಪಿ :
ಪ್ರಕರಣವನ್ನು ತಾಂತ್ರಿಕ ಸಾಧನಗಳು, ಅಧಿಕಾರಿ ಮತ್ತು ಸಿಬ್ಬಂದಿಯವರ ಅವಿರತ ಪ್ರಯತ್ನ ಮತ್ತು ಕಠಿಣ ಪರಿಶ್ರಮಗಳ ಮೂಲಕ ಕ್ಷಿಪ್ರಗತಿಯಲ್ಲಿ ಭೇದಿಸಿದ್ದು, ಪ್ರಕರಣದ ಪತ್ತೆ ಕುರಿತು ಕರ್ತವ್ಯ ನಿರ್ವಹಿಸಿದ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಠಿಣ ಪರಿಶ್ರಮ, ಸಮರ್ಪಣಾಭಾವದ ಕರ್ತವ್ಯ ನಿರ್ವಹಣೆ, ಕೌಶಲ್ಯ, ಬದ್ಧತೆಗಳನ್ನು, ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಠೋಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ೦೩ ಜನ ಆರೋಪಿತರಿಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದು, ಆರೋಪಿತರು ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿತರಾದ ಬಾಲರಾಜ ಮಣಿಕಮ್ ಗೋವಿಂದು ಯೆರುಕುಲಾ, ಗುಂಡು ಜೊಸೇಫ್ ಗುಂಡು ಶ್ಯಾಮಬಾಬು, ಚಂದನರಾಜ್ ವರದರಾಜ್ ಪಿಳ್ಳೆ, ಇಜಾಜ್ ಮಕ್ಬೂಹ್ಮದ ಧಾರವಾಡ, ಪೀಟರ್ ಅಲಿಯಾಸ್ ವಿನೋದಚಂದ ಜಯಚಂದ್ರಪಾಲ್, ೪೦ ವರ್ಷ, ಸುಸೈರಾಜ್ ಪ್ರಾನ್ಸಿಸ್ ಡ್ಯಾನಿಯಲ್, ೪೪ ವರ್ಷ, ಬಾಬುರಾವ ಧನಮ್ ಮಿರಿಯಾಲ, ೪೦ ವರ್ಷ, ಮಹಮ್ಮದಆಸೀಫ್ ಮಹಮ್ಮದಯೂಸೂಫ್ ಕಲ್ಲೂರ, ೩೧ ವರ್ಷ, ಅನೀಲ ಮೋಹನರಾವ ಮಿರಿಯಾಲ, ೪೦ ವರ್ಷ, ಅಬು ಅಲಿಯಾಸ್ ಮೋಹನಕುಮಾರ ಗುಂಡಯ್ಯ ಯಶ್ಮಾಲಾ, ೪೨ ವರ್ಷ, ಸೋಲೋಮನ್ವೇಸ್ಲಿ ವಿಲ್ಸಮಾಪತಿ ಪಲುಕುರಿ, ೪೦ ವರ್ಷ, ಮರಿಯಾದಾಸ ಜೋಬು ಅಲಿಯಾಸ್ ಯೋಬು ಗೋನಾ, ೪೦ ವರ್ಷ ಇವರುಗಳನ್ನು ಬಂಧಿಸಿ, ಇವರಿಂದ ಕೃತ್ಯಕ್ಕೆ ಬಳಸಿದ ೫ ಕಾರುಗಳು (೨ ಇನ್ನೊವಾ, ೧ ರೆನಾಲ್ಟ್, ೧ ಕೀಯಾ, ೧ ಸ್ವಿಪ್ಟ್) ಹಾಗೂ ರೇಲ್ವೆ ಇಲಾಖೆಯ ಟಾಟಾ ಕಂಪನಿಯ ಒಂದು ಲಾರಿ ಹಾಗೂ ಬ್ಯಾಂಕಿನ ಸೇಫ್ ಲಾಕರ್ ತೆರೆಯಲು ಬಳಸಿದ ನಕಲಿ ಕೀಲಿಕೈಗಳು ಹಾಗೂ ನಕಲಿ ಕೀಲಿಕೈಗಳನ್ನು ತಯಾರಿಸಲು ಬಳಸಿದ ಸಲಕರಣೆಗಳು, ಹೆಕ್ಸಾ ಬ್ಲೇಡ್ ಗಳು ಮತ್ತು ಬಂಗಾರ ಕರಗಿಸಲು ಬಳಸಿದ ೨ ಗ್ಯಾಸ್ ಸಿಲಿಂಡರ್ ಗಳು, ೧ ಆಕ್ಸಿಜನ್ ಸಿಲಿಂಡರ್, ಬರ್ನಿಂಗ್ ಗನ್, ಸ್ಪ್ಯಾನರಗಳು, ಕಳ್ಳತನ ಕಾಲಕ್ಕೆ ಸಂವಹನಕ್ಕಾಗಿ ಬಳಸಿದ ೪ ವಾಕಿಟಾಕಿಗಳು ಹಾಗೂ ಒಂದು ಪಿಸ್ತೂಲ್ ನಂತಿರುವ ಸಿಗರೇಟ್ ಲೈಟರ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್ಲ ಆರೋಪಿತರಿಂದ ಕಳ್ಳತನ ಮಾಡಿದ್ದ ಒಟ್ಟು ೩೯ ಕೆ.ಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಅದರಲ್ಲಿನ ಬಂಗಾರವನ್ನು ಮಾರಾಟ ಮಾಡಿ ಬಂದ ಹಣವನ್ನು ಗೋವಾದ ಮೆಜೆಸ್ಟಿಕ್ ಪ್ರೆೈಡ್ ಕ್ಯಾಸಿನೋದಲ್ಲಿ ಡಿಪಾಸಿಟ್ ಮಾಡಿದ್ದ ನಗದು ಹಣ ೧.೧೬ ಕೋಟಿ ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಒಟ್ಟು ೧೫ ಜನ ಆರೋಪಿತರನ್ನು ಬಂಧಿಸಿದ್ದು, ಅವರಿಂದ ಒಟ್ಟು ೩೯ ಕೆಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳನ್ನು ಮತ್ತು ೧.೧೬ ಕೋಟಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ ಒಟ್ಟು ೩೯.೨೬ ಕೋಟಿ ರೂಗಳಿಗಿಂತ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲು ಮಾಡುವಾಗ ಕೆನರಾ ಬ್ಯಾಂಕ್ ಅಧಿಕಾರಿಗಳು ಎಫ್ ಐಆರ್ ನಲ್ಲಿ ೫೮.೯೭ ಕೆ.ಜಿ (೫೮,೯೭೬.೯೪ಗ್ರಾಂ.) ಒಟ್ಟು ತೂಕದ (ಉಡಿoss Weighಣ) ಬಂಗಾರದ ಆಭರಣಗಳು ಕಳ್ಳತನವಾದ ಬಗ್ಗೆ ದೂರು ನೀಡಿದ್ದು, ತನಿಖೆಯ ಕಾಲಕ್ಕೆ ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಕಳ್ಳತನವಾದ ಆಭರಣಗಳಲ್ಲಿ ನಿವ್ವಳ ಬಂಗಾರದ ಪ್ರಮಾಣವನ್ನು ನಿಖರವಾಗಿ ಪರಿಶೀಲನೆ ನಡೆಸಿ, ಒಟ್ಟು ೪೦.೭ ಕೆ.ಜಿ ನಿವ್ವಳ ತೂಕ (ಓeಣ Weighಣ) ಬಂಗಾರ ಇರುವ ಬಗ್ಗೆ ಲಿಖಿತ ವರದಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.