ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ವಿವಿಧ ಸಣ್ಣ ಸಣ್ಣ ವೃತ್ತಿ ಕೈಗೊಂಡು, ವೃತ್ತಿಯನ್ನೇ ಅವಲಂಬಿಸಿ ಶ್ರಮಿಜೀವಿಯಾಗಿ ತಮ್ಮ ಜೀವನ ನಿರ್ವಹಿಸುತ್ತಿರುವ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಜೀವನ ಮಟ್ಟ ಸುಧಾರಣೆಗೆ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮ0ದಿರದಲ್ಲಿ ಬುಧವಾರ ಆಯೋಜಿಸಿದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ವಿತರಿಸಿ ಅವರು ಮಾತನಾಡಿದರು.
ರಾಜ್ಯದಾದ್ಯಂತ ವಿವಿಧ ವೃತ್ತಿಗಳಲ್ಲಿ ತೊಡಗಿರುವ ೯೧ ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಷ್ಟೇನೂ ಸಬಲರಾಗಿರುವುದಿಲ್ಲ. ಸಂಘಟಿತ ಕಾರ್ಮಿಕರಿಗೆ ದೊರಕುವ ಕಾನೂನಾತ್ಮಕ ಸೌಲಭ್ಯಗಳು ಅಸಂಘಟಿತ ಕಾರ್ಮಿಕರಿಗೂ ದೊರೆತು ಅವರ ಜೀವನಮಟ್ಟ ಸುಧಾರಣೆಗೊಳ್ಳಲಿ ಎಂದು ಸರ್ಕಾರ ಸದುದ್ದೇಶ ಹೊಂದಿ, ವಿವಿಧ ಯೋಜನೆಗಳಡಿ ಈ ಕಾರ್ಮಿಕರನ್ನು ಒಳಪಡಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಅಸಂಘಟಿತ ವಲಯದ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬ0ಧಿಸಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಸೌಲಭ್ಯ ಒದಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಮೋಟಾರ ಸಾರಿಗೆ ಮತ್ತು ಇತರೆ ಸಂಬ0ಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಅಧಿನಿಯಮ ೨೦೨೪ನ್ನು ಜಾರಿಗೆ ತಂದಿದ್ದು, ಇದಕ್ಕನುಗುಣವಾಗಿ ನಿಯಮಾವಳಿಗಳನ್ನು ರೂಪಿಸಿ ಮಂಡಳಿ ಮೂಲಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ, ಕರ್ನಾಟಕ ರಾಜ್ಯ ದಿನ ಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ, ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬ0ಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ, ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-೨೦೨೪, ಕರ್ನಾಟಕ ಪ್ಲಾಟ್‌ಫಾರ್ಮ ಆಧಾರಿತ ಗಿಗ್ ಕಾರ್ಮಿಕರ ಅಧಿನಿಮ-೨೦೨೫, ಕಾರ್ಮಿಕರಿಗೆ ಸುರಕ್ಷತೆ ಒದಗಿಸುವ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು-೨೦೨೪ ಸೇರಿದಂತೆ ಮಂಡಳಿ ವತಿಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರು ಮಾತನಾಡಿ, ಅಸಂಘಟಿತ ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ದುರ್ಬಲ ವರ್ಗದವರನ್ನು ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಾರ್ಮಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಬದುಕನ್ನು ಸುಭದ್ರಗೊಳಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ೧೫ ಜನ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರದಡಿ ಇಬ್ಬರಿಗೆ ಪರಿಹಾರ ಚೆಕ್, ಅಪಘಾತದಿಂದ ಮರಣ ಹೊಂದಿದ ಇಬ್ಬರೂ ಕಾರ್ಮಿಕರ ಮಕ್ಕಳಿಗೆ ತಲಾ ೧೦ ಸಾವಿರ ರೂ. ಚೆಕ್ ಮತ್ತು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಮರಣ ಹೊಂದಿದ ಕಾರ್ಮಿಕರ ಅವಲಂಬಿತರಿಗೆ ೧೦ ಸಾವಿರ ರೂ.ಗಳ ಚೆಕ್‌ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿಗಳಾದ ಡಾ.ಎಸ್.ಬಿ.ರವಿಕುಮಾರ, ಕಾರ್ಮಿಕ ಇಲಾಖೆ ಉಪ ಕಾರ್ಮಿಕ ಆಯುಕ್ತರಾದ ಡಿ.ಜಿ.ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ, ಕಾರ್ಮಿಕ ಅಧಿಕಾರಿ ಶ್ರೀಮತಿ ಉಮಾಶ್ರೀ ಕೋಳಿ ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಕಾರ್ಮಿಕ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.