ಓದುವ ಹವ್ಯಾಸ ನಿತ್ಯ ನಿರಂತರವಾಗಿರಲಿ : ಸಂತೋಷ ಬಂಡೆ

Jun 20, 2025 - 23:16
 0
ಓದುವ ಹವ್ಯಾಸ ನಿತ್ಯ ನಿರಂತರವಾಗಿರಲಿ : ಸಂತೋಷ ಬಂಡೆ

ವಿಜಯಪುರ: ಓದುವುದರಿಂದ ಮಕ್ಕಳಲ್ಲಿ ಸ್ಮರಣಶಕ್ತಿ, ಏಕಾಗ್ರತೆ ಸುಧಾರಿಸುತ್ತದೆ. ಓದುವುದು ನಮ್ಮ ಕಲ್ಪನೆ ಮತ್ತು ಸೃಜನಶೀಲತೆಗೆ ಇಂಧನ ನೀಡುತ್ತದೆ. ಪುಸ್ತಕ ಓದುವ ಹವ್ಯಾಸ ನಿತ್ಯ ನಿರಂತರವಾಗಿರಲಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
      ಶುಕ್ರವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ 'ರಾಷ್ಟ್ರೀಯ ಓದುವ ದಿನ'ದ ನಿಮಿತ್ತ ಹಮ್ಮಿಕೊಂಡ 'ಓದು- ಪುಸ್ತಕ ಓದು'-ಚಿಂತನ ಗೋಷ್ಠಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
        ಓದುವುದರಿಂದ ಇತಿಹಾಸ, ವಿಜ್ಞಾನ, ಸಾಹಿತ್ಯದಂತಹ ಅನೇಕ ವಿಷಯಗಳನ್ನು ಅನ್ವೇಷಿಸಿ, ಆಳವಾದ ತಿಳಿವಳಿಕೆ, ಜ್ಞಾನ ಪಡೆಯಲು ಸಾಧ್ಯ. ಓದುವ ಮೂಲಕ, ನಾವು ಹೊಸ ಸಂಸ್ಕೃತಿ, ವಿಚಾರ ಮತ್ತು ದೃಷ್ಟಿಕೋನಗಳನ್ನು ಅರಿತು, ನಮ್ಮ ಜ್ಞಾನ ವಿಸ್ತರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
          ಜ್ಯೋತಿ ಬೆಳಗಿಸಿ ಮಾತನಾಡಿದ ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕ ಎಸ್ ಆರ್ ರೇವತಾಗಾಂವ, ಓದುವದರಿಂದ ನಮ್ಮ ಶಬ್ದಕೋಶ ವಿಸ್ತಾರವಾಗಿ ಭಾಷಾ ಕೌಶಲ್ಯ ವೃದ್ಧಿಯಾಗುತ್ತದೆ. ಓದುವುದು ನಮ್ಮ ಅರಿವಿನ ಬೆಳವಣಿಗೆಯನ್ನು ಉತ್ತೇಜಿಸಿ, ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುವ ಜತೆಗೆ ಸೃಜನಶೀಲತೆಯನ್ನು ಪೋಷಿಸುತ್ತದೆ ಎಂದು ಹೇಳಿದರು.
         ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ,  "ಓದುವ ಪಿತಾಮಹ" ಎಂದೇ ಖ್ಯಾತಿಯಾದ ಪಿ ಎನ್ ಪಣಿಕ್ಕರ್ ಅವರು ಗ್ರಂಥಾಲಯ ಚಳುವಳಿ ಮೂಲಕ ಭಾರತದಲ್ಲಿ ಓದುವ ಪ್ರೀತಿಯನ್ನು ಹುಟ್ಟುಹಾಕಿದರು. ಓದುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ ಎಂದು ಹೇಳಿದರು.
        ಶಿಕ್ಷಕರಾದ ಸಂತೋಷ ಹಳ್ಳಿಕೇರಿ,ಎನ್ ಎಸ್ ಪಾಟೀಲ, ಸಂತೋಷ ಪವಾರ, ಬಿ ಡಿ ಸಿನಖೇಡ, ಆನಂದ ಗಂಗನಳ್ಳಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.