ಗುಮ್ಮಟನಗರಿಯಲ್ಲಿ ಉಗ್ರ ಪತ್ತೆ

Jul 12, 2025 - 08:39
 0
ಗುಮ್ಮಟನಗರಿಯಲ್ಲಿ ಉಗ್ರ ಪತ್ತೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ : ೧೯೯೮ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿಯನ್ನು ತಮಿಳುನಾಡು ಪೊಲೀಸ್, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಗುಪ್ತಚರ ಇಲಾಖೆ ನೆರವಿನ ಮೇರೆಗೆ ಗುಮ್ಮಟನಗರಿ ವಿಜಯಪುರ ನಗರದಲ್ಲಿ ಬಂಧಿಸಿದ್ದಾರೆ.  

       

ಸಾದಿಕ್ ರಾಜಾ ಅಲಿಯಾಸ್ ಟೈಲರ್ ರಾಜಾ ಅಲಿಯಾಸ್ ಶಹಜಹಾನ್ ಅಬ್ದುಲ್ ಮಜೀದ್ ಮಕಾಂರ್ದ ಅಲಿಯಾಸ್ ಶಹಜಹಾನ್ ಶೇಕ್ (೫೦) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.             

ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಸಾದಿಕ್ ರಾಜಾ ಕೊಮತ್ತೂರು ಸ್ಫೋಟ ಪ್ರಕರಣದ ಬಳಿಕ ರಾಜ್ಯದ ಹುಬ್ಬಳ್ಳಿ ಮತ್ತು ವಿಜಯಪುರ ನಗರದಲ್ಲಿ ಕಳೆದ ೨೯ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.                     ಹುಬ್ಬಳ್ಳಿಯ ಮಹಿಳೆಯೊಬ್ಬರನ್ನು ವಿವಾಹವಾಗಿದ್ದ ಆರೋಪಿಯು, ಕಳೆದ ೧೨ ವರ್ಷಗಳಿಂದ ವಿಜಯಪುರ ನಗರದಲ್ಲಿ ತರಕಾರಿ ಮಾರಾಟ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.             

ಪ್ರಕರಣದ ತನಿಖೆ ಸಂಬಂಧ ತಮಿಳುನಾಡು ಪೊಲೀಸರು ಆರೋಪಿಯನ್ನು ಕೊಯಮತ್ತೂರಿಗೆ ಕರೆದೊಯ್ದು, ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ೧೯೯೬ರಲ್ಲಿ ಕೊಯಮತ್ತೂರು ಜೈಲಿನಲ್ಲಿದ್ದ ಈತ ನಡೆಸಿದ್ದ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ಜೈಲು ವಾರ್ಡನ್ ಸಾವನ್ನಪ್ಪಿದರು.    ‘ಭಯೋತ್ಪಾದನಾ ಪ್ರಕರಣಗಳ ಜೊತೆಗೆ, ೧೯೯೬ರಲ್ಲಿ ನಾಗ್ಪೂರದಲ್ಲಿ ನಡೆದ ಕೊಲೆ ಪ್ರಕರಣ ಮತ್ತು ೧೯೯೭ರಲ್ಲಿ ಮಧುರೈನಲ್ಲಿ ನಡೆದ ಜೈಲರ್ ಜಯಪ್ರಕಾಶ್ ಅವರ ಕೊಲೆ ಪ್ರಕರಣದಲ್ಲಿ ಟೈಲರ್ ರಾಜಾ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.                     

೧೯೯೭ರ ನವೆಂಬರ್, ಡಿಸೆಂಬರ್‌ನಲ್ಲಿ ಕೊಯಮತ್ತೂರಿನಲ್ಲಿ ಹಿಂದೂ-ಮುಸ್ಲಿಂ ಗಲಾಟೆಗಳು ನಡೆದಿದ್ದವು. ಆಲ್ ಉಮ್ಮಾ ಸಂಘಟನೆಯ ಕಾರ್ಯಕರ್ತನನ್ನು ಬಂಧಿಸಿದ್ದಾರೆ ಎಂದು ಆ ಸಂಘಟನೆಯ ಕೆಲವರು ಸ್ಥಳೀಯ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪ್ರತಿಯಾಗಿ ಕೊಯಮತ್ತೂರಿನಲ್ಲಿ ಸರಣಿ ಕೋಮು ಗಲಭೆಗಳು ನಡೆದಿದ್ದವು. ಆ ಗಲಭೆಗಳಲ್ಲಿ ೧೮ ಮುಸ್ಲಿಮರು, ೨ ಹಿಂದೂಗಳು ಸೇರಿ ೨೦ ಜನ ಮೃತರಾಗಿದ್ದರು. ಇದಕ್ಕೆ ಪ್ರತಿಯಾಗಿ ಟೈಲರ್ ರಾಜಾ ಹಾಗೂ ಇತರರು ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. ೧೯೯೮ ಫೆಬ್ರುವರಿ ೧೪ ರಂದು ಅಡ್ವಾಣಿ ಅವರು ಕೊಯಮತ್ತೂರಿಗೆ ಚುನಾವಣಾ ಸಭೆಗೆ ಬಂದಿದ್ದರು. ಅವರು ಬರುವ ಸಮಯದಲ್ಲಿ ಕೊಯಮತ್ತೂರಿನ ೧೨ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ೧೨ ಸ್ಥಳಗಳಲ್ಲಿ ೧೧ ಸರಣಿ ಬಾಂಬ್ ಸ್ಫೋಟಗೊಂಡು ೫೮ ಜನ ಮೃತರಾಗಿದ್ದರು. ೨೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಪೊಲೀಸ್ ಮುಂಜಾಗ್ರತೆಯಿಂದ ಎಲ್.ಕೆ ಅಡ್ವಾಣಿ ಬದುಕುಳಿದಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.