ಅಧಿಕಾರ ಶಾಶ್ವತವಲ್ಲ, ಮಾಡಿರುವ ಕಾರ್ಯ ಶಾಶ್ವತ : ಶಾಸಕ ಬಸನಗೌಡ ಪಾಟೀಲ ಯತ್ನಾಳ

Jun 24, 2025 - 18:21
 0
ಅಧಿಕಾರ ಶಾಶ್ವತವಲ್ಲ, ಮಾಡಿರುವ ಕಾರ್ಯ ಶಾಶ್ವತ : ಶಾಸಕ ಬಸನಗೌಡ ಪಾಟೀಲ ಯತ್ನಾಳ

ಅಪರಾಧಕ್ಕೆ ಸವಾಲು  ಕನ್ನಡ ದಿನಪತ್ರಿಕೆ 

ವಿಜಯಪುರ: ಅಧಿಕಾರ ಶಾಶ್ವತವಲ್ಲ. ನಾವು ಮಾಡಿರುವ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಹಾಗೇ ವಿಜಯಪುರ ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಿ, ಜನರ ವಿಶ್ವಾಸ ಉಳಿಸಿಕೊಂಡಿರುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.                

ನಗರದ ವಾರ್ಡ್ ನಂ.೩೩ ರ ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರದ ವರೆಗೆ ಮತ್ತು ಮದೀನಾ ನಗರದಿಂದ ಸಾಯಿ ನಗರದ ವರೆಗೆ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವುದು ಹಾಗೂ ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರ ಮೂಲಕ ಸಾಯಿ ನಗರ ವರೆಗೆ ರೂ.೧.೫ ಕೋಟಿ ಅನುದಾನದಲ್ಲಿ ಆಂತರಿಕ ಒಳಚರಂಡಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.            

೨೦೧೮ರ ಚುನಾವಣೆಯಲ್ಲಿ ನನ್ನ ಮೇಲೆ ಬಹುದೊಡ್ಡ ಸವಾಲ್ ಇತ್ತು. ನಗರದಲ್ಲಿ ಎಲ್ಲಿ ಹುಡುಕಿದರೂ ಒಂದು ಒಳ್ಳೆಯ ರಸ್ತೆ ಇರಲಿಲ್ಲ, ಚರಂಡಿ ವ್ಯವಸ್ಥೆಯೂ ಇರಲಿಲ್ಲ. ಎಲ್ಲಿ ನೋಡಿದರಲ್ಲಿ ದೂಳು.  ನಗರ ಜನತೆಯ ಆಶೀರ್ವಾದದಿಂದ ಗೆದ್ದು, ದೂಳಾಪುರ ವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಿ, ಜನರು ನನ್ನ ಮೇಲೆ ಇಟ್ಟ ವಿಶ್ವಾಸ ಉಳಿಸಿಕೊಂಡಿದಲ್ಲದೆ, ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ನಗರದ ಪಟ್ಟಿಯಲ್ಲಿ ವಿಜಯಪುರ ನಗರ ೩ನೇ ಸ್ಥಾನಕ್ಕೆ ತಂದಿರುವ ಹೆಮ್ಮೆಯಿದೆ. ಇದುವೆ ನಾನು ಮಾಡಿರುವ ಅಭಿವೃದ್ಧಿಗೆ ಸಾಕ್ಷಿ ಎಂದರು.        ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಾಗಗಳನ್ನು ಉದ್ಯಾನ, ಓಪನ್ ಜಿಮ್, ಯೋಗಾ ಕೇಂದ್ರ ಮತ್ತಿತರೆ ಸಾರ್ವಜನಿಕ ಉದ್ದೇಶಕ್ಕಾಗಿಯೇ ಬಳಸಬೇಕು. ಸ್ವತ ನಾನು ಉಪಯೋಗಿಸಲು ಬಂದರೂ ನನ್ನನ್ನೂ ಕೇಳಬೇಡಿ. ಯಾರಾದರೂ ಸಾರ್ವಜನಿಕ ಉದ್ದೇಶದ ಜಾಗ ಕಬಳಿಸಲು ಯತ್ನಿಸಿದರೆ ತಕ್ಷಣ ತಿಳಿಸಿ, ಸರಿಯಾಗಿ ಕ್ರಮ ಕೈಗೊಳ್ಳೊಣ ಎಂದು ಕಿವಿಮಾತು ಹೇಳಿದರು.                

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ವಿಠ್ಠಲ ನಡುವಿನಕೇರಿ, ಆನಂದ ಹಂಜಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.