ಶ್ರೀಮಂತ ಜೀವನ ನಡೆಸಿದ ಈ ಧೀಮಂತ ಜೀವವನ್ನು ಗೌರವಿಸೋಣ ಬನ್ನಿ

ಅನೇಕರಿಗೆ ಮಾದರಿಯಾದ ಅಂಬೇಡ್ಕರವಾದಿ, ಹಿರಿಯ ಪತ್ರಕರ್ತ, ಲೇಖಕ, ಚಿಂತಕ, ಸಂಘಟನಾಕಾರ ಅನಿಲ ಹೊಸಮನಿ

Jul 13, 2025 - 09:53
 0
ಶ್ರೀಮಂತ ಜೀವನ ನಡೆಸಿದ ಈ ಧೀಮಂತ ಜೀವವನ್ನು ಗೌರವಿಸೋಣ ಬನ್ನಿ
ಅನಿಲ ಹೊಸಮನಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಸತ್ತ ಮೇಲೆಯೂ ಬದುಕಬೇಕೆಂದರೆ ಜನ ಓದುವ ಹಾಗೆ ಏನಾದರೂ ಬರೆದಿಟ್ಟು ಹೋಗಿ, ಇಲ್ಲವಾದರೆ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಮಾಡಿಟ್ಟು ಹೋಗಿ ಎಂಬುದು ದಲಿತ ಐಕಾನ್ ಡಾ. ಬಿ.ಆರ್ ಅಂಬೇಡ್ಕರ್ ಅವರ ನುಡಿಮುತ್ತುಗಳಲ್ಲೊಂದು.

ಗುಮ್ಮಟ ನಗರಿ ವಿಜಯಪುರದ ಅಪ್ಪಟ ಅಂಬೇಡ್ಕರವಾದಿ, ಹಿರಿಯ ಪತ್ರಕರ್ತ, ಲೇಖಕ, ಚಿಂತಕ, ಸಂಘಟನಾಕಾರ ಹೀಗೆ ಬಹುಮುಖಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ  ಅನಿಲ ಹೊಸಮನಿ ಅವರು ಜನರು ಓದುವಂತದ್ದನ್ನು ಬರೆದಿದ್ದಾರೆ. ಹಾಗೆಯೇ ಬರೆದಿಡುವುದಂತಹದನ್ನು ಕೂಡಾ ಮಾಡಿದ್ದಾರೆ. ಈ ಮೂಲಕ ಅವರು ಅನೇಕರಿಗೆ ಮಾದರಿಯಾಗಿದ್ದಾರೆ. 

ಸಮತೆ ಮಮತೆ ಎಂಬ ಜೀವನದ ಉದ್ಧಾತ ಮೌಲ್ಯಗಳನ್ನು ಉಸಿರಾಗಿಸಿಕೊಂಡಿರುವ ಇವರು ಸಮ ಸಮಾಜದ ಕನಸಿನೊಂದಿಗೆ ದಲಿತ ಚಳುವಳಿಯನ್ನು ಕಟ್ಟುತ್ತಲೇ ಯುವಶಕ್ತಿಗೆ ಮಾರ್ಗದರ್ಶಿರಾಗಿ, ಪತ್ರಕರ್ತರಾಗಿ, ಲೇಖಕರಾಗಿ ಅಂಬೇಡ್ಕರ ಹಾಗೂ ಬುದ್ಧನಿಗೆ ಸಂಬಂಧಿಸಿದ ಕೆಲ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದು, ಹೀಗೆಲ್ಲಾ ಸಮಾಜಕ್ಕಾಗಿ ದಣಿವಿಲ್ಲದೆ ದುಡಿಯುತ್ತಾ ನಮ್ಮ ನಡುವಿನ ದಂತಕತೆಯಂತಿದ್ದಾರೆ.  

ಇಂದು ಕಾರ್ಯಕ್ರಮ 

ಇಂದು ರವಿವಾರ ನಗರದ ಅಂಬೇಡ್ಕರ್ ಸರ್ಕಲ್ ಎದುರಿಗೆ ಇರುವ  ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ವತಿಯಿಂದ ಅನಿಲ ಹೊಸಮನಿ ಎಂಬ ಸಂಘರ್ಷದ ಒಡನಾಡಿಯೊಂದಿಗೆ ಬಿಜಾಪುರದಲ್ಲಿ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದಲಿತ ಅಸ್ಮಿತೆ ಹಾಗೂ ದಲಿತ ಸಾಕ್ಷಿಪ್ರಜ್ಞೆಯಂತಿರುವ ಕನ್ನಡದ ಅನನ್ಯ ಲೇಖಕ ಹಾಗೂ ಚಿಂತಕ ಪದ್ಮಶ್ರೀ ದೇವನೂರು ಮಹಾದೇವ ಹಾಗೂ ದಲಿತ ಸಮುದಾಯದ ನಾಡಿಮಿಡಿತವನ್ನು ಬಹಳ ಚೆನ್ನಾಗಿ ಅರಿತು ಅದನ್ನು ಅಕ್ಷರ ರೂಪಕ್ಕಿಳಿಸುವ ಮೂಲಕ ದಲಿತ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿ.ಡಾ.ಸಿದ್ದಲಿಂಗಯ್ಯನವರಂತಹ ದಿಗ್ಗಜರ ಕನಸಿನ ಕೂಸಾದ ಡಿಎಸ್ಎಸ್ ಅಂದರೆ ದಲಿತ ಸಂಘರ್ಷ ಸಮಿತಿಯು ಎಂಬತ್ತರ ದಶಕದಲ್ಲಿ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸ್ಥಾಪನೆಗೊಂಡಾಗ ಅದರ ಮೊದಲ ಜಿಲ್ಲಾ ಸಂಚಾಲಕರಾಗಿ ಹಿರಿಯ ದಲಿತ ನಾಯಕರಾದ ಅಭಿಷೇಕ ಚಕ್ರವರ್ತಿ ಅವರ ಆಯ್ಕೆಯಾದಾಗ ಇಡೀ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿರುವ ಸಮಯದಲ್ಲಿ ಇಡೀ ಚಳುವಳಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಅನೀಲ ಹೊಸಮನಿ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಸಮ ಸಮಾಜದ ಕನಸಿನೊಂದಿಗೆ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿಯ ಆರಂಭಿಕ ದಿನಗಳಲ್ಲಿ ಕಿಸೆಯಲ್ಲಿ ಕಾಸಿಲ್ಲದ ಕೆಚ್ಚೆದೆಯ ದಲಿತ ನಾಯಕರಿಗೆ ತಮ್ಮ ಸಣ್ಣ ಮನೆಯಲ್ಲೇ ಊಟ ವಸತಿಯನ್ನು ನೀಡಿ ಸಾಕಿ ಸಲುಹಿದ ಮಾತೃ ಹೃದಯಿಯಾಗಿದ್ದಾರೆ. ಸರಿ ರಾತ್ರಿಯೆನ್ನದೇ ಹಸಿದು ಮನೆಗೆ ಬಂದವರಿಗೆ ಒಂದು ಬಾರಿ ಕೂಡಾ ಬೆಸರಿಸದೇ ಊಟ ಹಾಕಿದ ಅನ್ನದಾನಿಯಾಗಿದ್ದಾರೆ. ಹೀಗೆ ಅನಿಲ ಹೊಸಮನಿ ಅವರ ಗರಡಿಯಲ್ಲಿ ಪಳಗಿದವರಲ್ಲಿ ಬಹುತೇಕರು ಇಂದು ನಾಯಕರಾಗಿ ಬೆಳೆದವರು ಕೂಡಾ ನಮ್ಮ ನಡುವೆ ಇದ್ದಾರೆ.

ಅಖಂಡ ಬಿಜಾಪುರ ಜಿಲ್ಲೆಯಲ್ಲಿ ಐದು ದಶಕಗಳಿಂದ ದಲಿತ ಚಳವಳಿಯಲ್ಲಿ ಮತ್ತು ಈ ಅವಧಿಯಲ್ಲಿ ನಡೆದ ಎಲ್ಲ ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರ ಮನೆತನದ ಮೂರು ತಲೆಮಾರಿನ ಚರಿತ್ರೆಯ ಕಥೆಯೇ ಅನೇಕ ವಿಶೇಷ ಹಾಗೂ ಮಹತ್ವದ ಸಂಗತಿಗಳನ್ನು ಬಿಚ್ಚಿಡುತ್ತದೆ. ಇವರ ದಶಕಗಳ ಚಳುವಳಿ ಚರಿತ್ರೆಯನ್ನು ಮೆಲುಕು ಹಾಕುವುದೆಂದರೆ ಬಿಜಾಪುರ ಜಿಲ್ಲೆಯ ದಲಿತ ಚಳುವಳಿಯನ್ನೇ ಅವಲೋಕನ ಮಾಡಿದ ಹಾಗೆ ಎಂದೇ ಬಣ್ಣಿಸಬಹುದು.

ದಲಿತ ಸಂಘರ್ಷ ಸಮಿತಿಯು ಹುಟ್ಟಿದಾಗ ಅದರಿಂದ ಇವರು ಎಷ್ಟು ಪ್ರಭಾವಿತರಾಗಿದ್ದರೆಂದರೆ ತಮಗೆ ಹುಟ್ಟಿದ ಮಗನಿಗೆ ಸಂಘರ್ಷನೆಂದೇ ಹೆಸರಿಟ್ಟರು. ಈತನು ಈಗ ಬಹುಜನ ನಾಯಕ ಎಂಬ ಹೆಸರಿನ ಪತ್ರಿಕೆಯ ಸಂಪಾದಕನಾಗಿ ಯುವಪತ್ರಕರ್ತನೆನಿಸಿಕೊಂಡಿದ್ದಾನೆ. ಇಂತಹ ಅದೆಷ್ಟೋ ಸಂಗತಿಗಳು ಇವರ ಬದುಕಿನಲ್ಲಿವೆ. 

ಯಾವುದಕ್ಕೂ, ಯಾರೊಂದಿಗೂ ರಾಜಿಯಾಗದೆ ತಾವು ನಂಬಿಕೊಂಡ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತಮ್ಮ ಆತ್ಮಸಾಕ್ಷಿಯಂತೆ ನಡೆಯುತ್ತಿರುವ ಇವರು ಇಂದಿನ ಸಾಂಸ್ಕೃತಿಕ ಕ್ಷೇತ್ರದ ರೋಗ ಓಲೈಕೆ ರಾಜಕಾರಣದಿಂದ ದೂರವಿದ್ದು, ಅಂಬೇಡ್ಕರ್ ತಾತ್ವಿಕತೆಗೆ ಬದ್ಧರಾಗಿ ಬದುಕುತ್ತಿದ್ದಾರೆ.

ಇಂತಹ ಧೀಮಂತ ವ್ಯಕ್ತಿಯನ್ನು ಅಭಿನಂದಿಸುವ ನಿಟ್ಟಿನಲ್ಲಿ ಇದುವರೆಗೆ ಯಾರೂ ಮಾಡದ ಕೆಲಸವನ್ನು ಮೇ ಸಾಹಿತ್ಯ ಬಳಗದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ಅವರು ಅನಿಲ ಹೊಸಮನಿ ಅವರ ಅಪಾರ ಸೇವೆಯನ್ನು ಪರಿಗಣನೆಗೆ ತೆಗದುಕೊಂಡು ಅರ್ಥಪೂರ್ಣ ಅಭಿನಂದನಾ ಕಾರ್ಯಕ್ರಮ ರೂಪಿಸಲು ಬದ್ದರಾಗಿ ನಿಂತವರಲ್ಲಿ ಮೊದಲಿಗರಾಗಿದ್ದಾರೆ.

ಇಂತಹ ಸಂಘರ್ಷದ ಒಡನಾಡಿಯೊಂದಿಗೆ ಒಂದು ದಿನ ಕಳೆಯಲು 2025 ಜುಲೈ 13 ರಂದು ಕಾರ್ಯಕ್ರಮ ಏರ್ಪಟ್ಟಿದೆ. ಸಾಧ್ಯ ಮಾಡಿಕೊಂಡು ಎಲ್ಲರೂ ಬನ್ನಿ. ಶ್ರೀಮಂತ ಜೀವನ ನಡೆಸಿದ ಈ ಧೀಮಂತ ಜೀವವನ್ನು ಗೌರವಿಸೋಣ.

ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರದ ಅಂಬೇಡ್ಕರ ಭವನದಲ್ಲಿ ನಡೆಯಲಿರುವ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸೌಭಾಗ್ಯವೇ ಸರಿ. ಇಡೀ ರಾಜ್ಯದ ಮೂಲೆ ಮೂಲೆಗಳಿಂದ ಹೊರರಾಜ್ಯದಿಂದ ಅನೀಲ ಹೊಸಮನಿ ಅವರನ್ನು ಅಭಿನಂದಿಸಲು ಬರುತ್ತಿದ್ದಾರೆ.

ನೀವು ಕೂಡಾ ಬನ್ನಿ,  ನಿಮ್ಮವರನ್ನು ಕರೆತನ್ನಿ. ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ.

-ಮಂಜುನಾಥ್ . ಎಸ್.ಕಟ್ಟಿಮನಿ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.