ಕಲಿಕೆಯ ಹಂಬಲ ಜ್ವರದಂತೆ ಕಾಡಬೇಕು : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್

ಪ್ರತಿಭೆ ಅಂದರೆ “ಪರೀಕ್ಷೆ ಫಲಿತಾಂಶ” ಅಲ್ಲ : ಶ್ರಮ ಮತ್ತು ಸಾಧನೆಯ ಮಿಶ್ರಣ

Jun 22, 2025 - 08:21
 0
ಕಲಿಕೆಯ ಹಂಬಲ ಜ್ವರದಂತೆ ಕಾಡಬೇಕು : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿದರು.    

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಮಲೆಮಹದೇಶ್ವರ ಬೆಟ್ಟ / ಬೆಂಗಳೂರು : ಕಲಿಯುವ ವಯಸ್ಸಿನಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನದ ದಾಹ ಮತ್ತು ಕಲಿಕೆಯ ಹಂಬಲ ಜ್ವರದಂತೆ ಕಾಡಬೇಕು. ಪ್ರತಿಭೆ ಅಂದರೆ ಕೇವಲ ಪರೀಕ್ಷಾ ಫಲಿತಾಂಶ ಅಲ್ಲ. ಜ್ಞಾನ ಮತ್ತು ನಿರಂತರ ಸಾಧನೆ ಮತ್ತು ನೀವು ಪಟ್ಟ ಪರಿಶ್ರಮ ಮೂರೂ ಬೆರೆತ ಮಿಶ್ರಣ. ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಎಲ್ಲಾ ಮಕ್ಕಳಿಗೂ ಎಲ್ಲಾ ಪೆÇೀಷಕರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ತಿಳಿಸಿದರು.

ಶನಿವಾರ ಮಲೆಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.     

ಇವತ್ತು ಶಿಕ್ಷಣ ವ್ಯವಸ್ಥೆ ಹೇಗಾಗಿದೆ, ಎಷ್ಟು ದುಬಾರಿ ಆಗಿದೆ ಎಂದರೆ, ಪೋಷಕರು ಸದಾ ಮಕ್ಕಳ ಶಿಕ್ಷಣದ ಬಗ್ಗೆಯೇ ಯೋಚಿಸುವಂತಾಗಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಪೋಷಕರು ತಮ್ಮ ಅಗತ್ಯ ಮತ್ತು ಅನುಕೂಲಗಳ ಜೊತೆ ರಾಜಿ ಮಾಡಿಕೊಳ್ಳುತ್ತಾರೆ.ಪೋಷಕರ ಈ ತಪಸ್ಸಿಗೆ ಸಾರ್ಥಕತೆ ಬರುವುದು ಅವರ ಮಕ್ಕಳು ಸಾಧನೆ ಮಾಡಿದಾಗ, ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಕಣ್ಣಲ್ಲಿ ಕಾಣುವ ಪೋಷಕರಿಗೆ ಇದಕ್ಕಿಂತ ದೊಡ್ಡ ಸಮಾಧಾನ ಬೇರೆ ಇರುವುದಿಲ್ಲ. ಜೊತೆಗೆ ಮಕ್ಕಳು ಪರಿಶ್ರಮದಿಂದ ಕಲಿತರೆ ಪೋಷಕರ ಮೇಲಿನ ಆರ್ಥಿಕ ಹೊರೆಯೂ ಕಡಿಮೆ ಆಗುತ್ತದೆ. ಆರ್ಥಿಕ ಹೊರೆ ಕಡಿಮೆ ಇದ್ದಾಗ ಸಹಜವಾಗಿ ಪೋಷಕರ ಆರೋಗ್ಯ ಮತ್ತು ಮನೆಯ ಆರೋಗ್ಯವೂ ಚೆನ್ನಾಗಿರುತ್ತದೆ. ಹೀಗಾಗಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ದಾಟಿದ ನಿಮ್ಮಗಳ ಮೇಲೆ ಪೋಷಕರನ್ನು ಖುಷಿಯಾಗಿಡುವ ಜವಾಬ್ದಾರಿ ಇರುತ್ತದೆ. ನಿಮ್ಮ ಪರಿಶ್ರಮ ಮತ್ತು ಜ್ಞಾನದಾಹ ಹಾಗೂ ಕಲಿಕೆಯ ಹಸಿವು ಹೆಚ್ಚಾಗಬೇಕು. ಈ ದಾಹ ಮತ್ತು ಹಸಿವು ನಿಮಗೆ ಜ್ವರದಂತೆ ಕಾಡಬೇಕು.

ಇಲ್ಲಿ ಪ್ರತಿಭಾ ಸ್ವೀಕಾರಕ್ಕೆ ಬಂದಿರುವ ಮಕ್ಕಳ ಜೊತೆ ಎರಡು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಒಂದು, ನಮ್ಮ ಎಲ್ಲಾ ಸಾಧನೆಗಳಿಗೂ ನಾವು ಬದುಕುತ್ತಿರುವ ಸಮಾಜದ ಕೊಡುಗೆ ಇರುತ್ತದೆ.  ಸಮಾಜ ಎಂದರೆ ಶರೀರ ಇದ್ದ ಹಾಗೆ. ನಾವು ಈ ಶರೀರದೊಳಗೆ ಬದುಕುತ್ತಿದ್ದೇವೆ. ನಾವು ಇರುವ ಶರೀರವನ್ನು ಕಟ್ಟುಮಸ್ತಾಗಿ, ಆರೋಗ್ಯಕರವಾಗಿ, ಆನಂದಮಯವಾಗಿ ಇಟ್ಟುಕೊಳ್ಳುವುದೇ ನಮ್ಮ ಪ್ರತಿಭೆಗೆ, ನಮ್ಮ ಸಾಧನೆಗೆ ಸಿಗುವ ನಿಜವಾದ ಪುರಸ್ಕಾರ ಎಂದು ಭಾವಿಸುತ್ತೇನೆ. ಎರಡು, ಇಂದು ಸಮಾಜದಲ್ಲಿ ಭ್ರಷ್ಟಾಚಾರ ಇರುವುದಕ್ಕೆ ಮುಖ್ಯ ಕಾರಣ ಆರೋಗ್ಯ ಮತ್ತು ಶಿಕ್ಷಣ ಅತ್ಯಂತ ದುಬಾರಿ ಆಗಿರುವುದೇ ಕಾರಣ ಆಗಿದೆ. ಮಕ್ಕಳ ಓದಿನ ಖರ್ಚು, ಹಿರಿಯರ ಆಸ್ಪತ್ರೆ ಖರ್ಚು ನಮ್ಮ ನಿದ್ದೆಗೆಡಿಸುತ್ತದೆ. ಸಮಾಜದಲ್ಲಿ ಇದು ಬದಲಾಗಬೇಕು. ಈ ಬದಲಾವಣೆಗೆ ಪೂರಕವಾಗಿ ನೀವುಗಳು ವಿದ್ಯಾರ್ಥಿ ಜೀವನದಿಂದಲೇ ಯೋಚಿಸಬೇಕು. ನಾವು ಬದುಕುತ್ತಿರುವ ಸಮಾಜವೆಂಬ ಈ ಶರೀರ ಇನ್ನಷ್ಟು ಆನಂದವಾಗಿರಲು, ಇನ್ನಷ್ಟು ಆರೋಗ್ಯಕರವಾಗಿರಲು ನಾವೇನು ಮಾಡಬೇಕು ಎನ್ನುವ ದಿಕ್ಕಿನಲ್ಲಿ ಸದಾ ಚಿಂತನಾಶೀಲರಾಗಿರಬೇಕು. ಈ ಚಿಂತನಶೀಲತೆ ನಮ್ಮ ಜ್ಞಾನ ದಾಹ ಮತ್ತು ವಿವೇಕದ ಹಸಿವನ್ನು ಹೆಚ್ಚಿಸುತ್ತದೆ. ಈ ಎರಡು ಸಂಗತಿಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳುವುಕ್ಕಾಗಿ ಮತ್ತು ಪೋಷಕರನ್ನು ವೃದ್ದಾಶ್ರಮಗಳಿಗೆ ಕಳುಹಿಸದಂತೆ ನಾವು ಜವಾಬ್ದಾರರಾಗಬೇಕು ಎನ್ನುವ ನನ್ನ ಕೋರಿಕೆಗಳನ್ನು ನಿಮ್ಮ ಮುಂದೆ ಇಡಲು ನಾನು ಇಲ್ಲಿಗೆ ಬಂದಿದ್ದೇನೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸತತ ಐದನೇ ವರ್ಷ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿದೆ. ಇದಕ್ಕಾಗಿ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪದಾಧಿಕಾರಿಗಳನ್ನೂ ನಾನು ಅಭಿನಂದಿಸುತ್ತೇನೆ ಎಂದರು.

ಜುಲೈ 1 ಕ್ಕೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ವೃತ್ತಿ ಮತ್ತು ಬದುಕಿನ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಜುಲೈ 1 ಕ್ಕೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನ ಮತ್ತು ತಾಲ್ಲೂಕು ಪತ್ರಕರ್ತರ ಭವನದ ನಿರ್ಮಾಣಕ್ಕೂ ಸರ್ಕಾರದ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.