ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ : ಶಾಸಕ ಯತ್ನಾಳ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ವಿಜಯಪುರ ನಗರದ ಅಲ್ ಅಮೀನ್ ಮೆಡಿಕಲ್ ಕಾಲೇಜ್ ಹಿಂಭಾಗದ ನಮೋ ನಗರ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿ+೧ ಮಾದರಿಯ ೧,೪೯೩ ಗುಂಪು ಮನೆಗಳ ಪೈಕಿ, ಈಗಾಗಲೇ ನಿರ್ಮಾಣಗೊಂಡ ೩೦೦ ಫಲಾನುಭವಿಗಳಿಗೆ ಅಂತಿಮ ಹಕ್ಕುಪತ್ರ ನೀಡಲಾಗಿದ್ದು, ಫಲಾನುಭವಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಮರ್ಪಕ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಬೀದಿ ದೀಪ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ತ್ವರಿತವಾಗಿ ಒದಗಿಸಲು ಕ್ರಮಕೈಗೊಳ್ಳುವಂತೆ ನಗರ ಶಾಸಕರಾದ ಬಸನಗೌಡ ಪಾಟೀಲ್ (ಯತ್ನಾಳ) ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಿ.ಎಂ.ಎ.ವಾಯ್ ಯೋಜನೆಯಡಿ ಮನೆಗಳ ಹಂಚಿಕೆ ಮತ್ತು ಮೂಲಭೂತ ಸೌಲಭ್ಯಗಳ ಕುರಿತ ಸಭೆಯಲ್ಲಿ ಮಾತನಾಡಿದರು.
೪೩೯ ಫಲಾನುಭವಿಗಳಿಗೆ ತಾತ್ಕಾಲಿಕ ಹಕ್ಕುಪತ್ರ ನೀಡಲಾಗಿದ್ದು, ಈ ಯೋಜನೆಯಡಿ ನಿರ್ಮಾಣ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಈ ವಸತಿ ಗೃಹಗಳಲ್ಲಿ ವಾಸಿಸುವ ಕುಟುಂಬಗಳ ಅನುಕೂಲವಾಗುವಂತೆ ಅಂಗನವಾಡಿ ಕೇಂದ್ರ, ಮಾರುಕಟ್ಟೆ, ದಿನಸಿ ಅಂಗಡಿ, ಶುದ್ಧ ಕುಡಿಯುವ ನೀರಿನ ಘಟಕ, ಸಮರ್ಪಕ ವಿದ್ಯುತ್ ಸೌಲಭ್ಯ, ಒಳಚರಂಡಿ ಹಾಗೂ ಇತರೇ ಮೂಲಭೂತ ಸೌಕರ್ಯ ಒದಗಿಸಲು ಪ್ರಥಮ ಆಧ್ಯತೆ ನೀಡಬೇಕು. ವಿಕಲಚೇತನರ ಫಲಾನುಭವಿಗಳಿದ್ದಲ್ಲಿ ಅವರಿಗೆ ಕೆಳಮಹಡಿ ಮನೆ ದೊರೆಯುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ಈ ಆಶ್ರಯ ಮನೆಗಳಿಗೆ ಅರ್ಜಿ ಸಲ್ಲಿಸಿ, ವಂತಿಕೆ ಹಣ ಭರಿಸಲು ಸಾಧ್ಯವಾಗದೇ ಇರುವ ಫಲಾನುಭವಿಗಳಿಗೆ ವಿವಿಧ ರಾಷ್ರ್ಟಿಕೃತ ಬ್ಯಾಂಕಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವಂತೆ ಸಭೆಯಲ್ಲಿ ಹಾಜರಿದ್ದ ವಿವಿಧ ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸದರಿ ನಮೋ ನಗರ ಪ್ರದೇಶಕ್ಕೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಆರ್.ಓ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರು ಮಹಾನಗರ ಪಾಲಿಕೆ ಹಾಗೂ ಕನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.
ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಯೋಗಾಪೂರ, ಗಾಂಧಿ ನಗರ, ಬಸವ ನಗರ ಹಾಗೂ ಹಮಾಲ ಕಾಲೋನಿಯ ಆಶ್ರಯ ಬಡಾವಣೆಯಲ್ಲಿ ಹಕ್ಕು ಪತ್ರ ಇರದೇ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಗುನ್ನಾಪೂರ ರಸ್ತೆಯ ಗಾಂಧಿ ನಗರದಲ್ಲಿ ನಿರ್ಮಿಸಲಾದ ಜಿ+೧ ಗುಂಪು ಮನೆಗಳನ್ನು ಫಲಾನುಭವಿಗಳಿಗೆ ಅಂತಿಮ ಹಕ್ಕು ಪತ್ರದಂತೆ ಹಂಚಿಕೆ ಮಾಡಿದ್ದು, ಈ ಕೂಡಲೇ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ನಗರದಲ್ಲಿ ನಿರ್ಮಿಸಲಾಗಿರುವ ವಿವಿಧ ವಸತಿ ಗೃಹಗಳಲ್ಲಿ ಈವರೆಗೆ ವಸತಿ ಗೃಹಗಳ ಹಕ್ಕು ಪತ್ರ ವಿತರಣೆ ಮಾಡಿದ ಸಮಗ್ರ ಮಾಹಿತಿ ಹಾಗೂ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಜಲ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಗೋವಿಂದ, ಸ್ಲಂ ಬೋರ್ಡಿನ ಕಾರ್ಯಪಾಲಕ ಅಭಿಯಂತರರಾದ ಪ್ರಹ್ಲಾದ ಪಾಟೀಲಮಹನಾಗರ ಪಾಲಿಕೆಯ ಅಧೀಕ್ಷಕ ಅಭಿಯಂತರರಾದ ತಿಮ್ಮಪ್ಪ, ಹೆಸ್ಕಾಂ ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಚನಗೊಂಡ, ಪಾಲಿಕೆಯ ಎ.ಇ.ಇ ಕೋಟೆನ್ನವರ ,ಕಾವ್ಯಶ್ರೀ ಇಂಗಳೇಶ್ವರ, ವಾಯ್.ಎಮ್ ಹಳ್ಳಿ, ಎಸ್.ಎಂ.ಸಾಗರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ,ಸಿಬ್ಬಂದಿ ಉಪಸ್ಥಿತರಿದ್ದರು.