ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ನಿಜಶರಣ ಹಡಪದ ಅಪ್ಪಣ್ಣನವರು ನಮ್ಮ ನಾಡಿನ ಸ್ವತ್ತು ಆಸ್ತಿ ಇದ್ದಂತೆ ಬಸವಾದಿ ಕಾಲದ ಎಲ್ಲ ಶರಣರು ಸಮ ಸಮಾಜವನ್ನು ನಿರ್ಮಿಸುವಲ್ಲಿ ಬಹಳಷ್ಟು ಶ್ರಮಿಸಿದವರು ಎಂದ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರ ತತ್ವಾದರ್ಶಗಳನ್ನು ಅವರ ವಚನಗಳ ಸಾರ ಮುಂದಿನ ಪೀಳಿಗೆಗೆ ತಿಳಿಸಬೇಕು. ಶರಣರು ತೋರಿಸಿದ ಜ್ಞಾನ ಪಥದಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಶಿವಶರಣರ ವಚನಗಳ ಪುಸ್ತಕಗಳನ್ನು ಓದುವಂತಾಗಬೇಕು ವಚನ ಸಂಸ್ಕೃತಿಯನ್ನು ಮನೆ-ಮನೆಗಳಿಗೆ ತಲುಪುವಂತಾಗಬೇಕು ಅವರ ವಿಚಾರಧಾರೆಗಳು ಸಮಪರ್ಕವಾಗಿ ಅನುಷ್ಟಾನಗೊಂಡಲ್ಲಿ ಮಾತ್ರ ಶರಣರಿಗೆ ಸಂದ ಗೌರವ ಎಂದು ತಿಳಿಸಿದರು.
೧೨ನೇ ಶತಮಾನದ ಶರಣರು ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ, ಮೌಢ್ಯತೆಯನ್ನು ತೊಡೆದು ಹಾಕಲು ವಚನಗಳ ಮೂಲಕ ಸಂದೇಶ ಸಾರಿದರು. ಹಡಪದ ಅಪ್ಪಣ್ಣ ಅವರು ಜ್ಞಾನಿಗಳು, ಇದೇ ಜಿಲ್ಲೆಯವರು. ಅವರ ವಚನಗಳು ಸಾರ್ವಕಾಲಿಕವಾಗಿವೆ ಎಂದು ಅವರು ಹೇಳಿದರು.
ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರು ಮಾತನಾಡಿ, ೧೨ನೇ ಶತಮಾನದ ಶರಣರು ಸಮಾಜದ ಅಂಕುಡೊಂಕು ಓರೆಕೋರೆ ತಿದ್ದುವಲ್ಲಿ ಬಹಳ ಶ್ರಮಿಸಿದರು. ಬಸವಣ್ಣನವರು ಮೂಡನಂಬಿಕೆಯನ್ನು ಹೋಗಲಾಡಿಸಲು ಹಡಪದ ಅಪ್ಪಣ್ಣವರನ್ನು ತಮ್ಮ ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸಿದರು. ನಮ್ಮ ಪೂರ್ವಜರು ಹಾಕಿಕೊಟ್ಟ ಮಾಗಧಲ್ಲಿ ನಡೆಯಬೇಕು.ವಚನಗಳ ಸಂಶೋಧನೆ ನಿರಂತರವಾಗಿ ನಡೆಯಬೇಕು. ಅವರ ವಚನಗಳಲ್ಲಿನ ಆದರ್ಶ ವಿಚಾರಗಳು ಜಯಂತಿಗೆ ಮಾತ್ರ ಸಿಮೀತವಾಗಿರದೇ ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಹಡಪದ ಅವರು ವಿಶೇಷ ಉಪನ್ಯಾಸ ನೀಡಿ, ಅವರು ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸುಧಾರಣೆಗೆ ಹಡಪದ ಅಪ್ಪಣ್ಣವರು ಕೊಡುಗೆ ಅಪಾರ. ಮೌಢ್ಯತೆ ಮೀರಿ ಮನುಷ್ಯತ್ವದ ನೆಲೆಗಟ್ಟಿನಲ್ಲಿ ಸತ್ಕಾರ್ಯಗಳನ್ನು ಮಾಡುವುದರ ಮೂಲಕ ಸಾರ್ಥಕ ಬದುಕು ಬದುಕಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ಸಾರಿದರು ಎಂದು ಹೇಳಿದರು.
ಶರಣರ ಒತ್ತಾಸೆಗಳನ್ನು ಹಡಪದ ಅಪ್ಪಣ್ಣವರಲ್ಲಿ ಕಾಣುತ್ತೇವೆ. ತತ್ವಾದರ್ಶಗಳಿಂದ ಖ್ಯಾತಿ ಪಡೆದಿದ್ದ, ಹಡಪದ ಅಪ್ಪಣ್ಣನವರ ಕುರಿತು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಅಪ್ಪಣ್ಣನವರು ೨೫೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ಅವರು ಹೇಳಿದರು.
ಶ್ರೀಮತಿ ವಿಶಾಲಾಕ್ಷಿ ಬಡಿಗೇರ ವಚನ ಗಾಯನ ನಡೆಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ವೈ.ಎಚ್.ನಾರಾಯಣಕರ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಬಸವರಾಜ ಶಿವಶರಣ, ಅಶೋಕ ಉತ್ನಾಳ, ಎಸ್.ಜಿ.ದೇವೂರ, ವಿರುಪಾಕ್ಷಿ ಕತ್ನಳ್ಳಿ, ದಶರಥ ನಾವಿ, ಪ್ರಕಾಶ ಹಡಪದ, ಮಲ್ಲಿಕಾರ್ಜುನ ಬಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ: ಕಾರ್ಯಕ್ರಮಕ್ಕೂ ಮೊದಲು, ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಭವ್ಯ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ ವೃತ್ತದಿಂದ ಸಾಗಿ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಸಮಾವೇಶಗೊಂಡಿತು.