ಸಂಗಮೇಶ ಬಬಲೇಶ್ವರಗೆ ಅಭಿನಂದನಾ ಸಮಾರಂಭ | ಜನ್ಮದಿನೋತ್ಸವ : ಯಶಸ್ಸಿನ ಹಾದಿಯಲ್ಲಿ ಸಂಗಮೇಶ ಸಾಗುತ್ತಿದ್ದಾರೆ : ಸಚಿವ ಲಾಡ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಅಧಿಕಾರ, ಆಸ್ತಿ, ಅಂತಸ್ತು, ಹಣವಿದ್ದ ಮಾತ್ರಕ್ಕೆ ಯಾರೂ ಯಶಸ್ವಿಯಾದಂತಲ್ಲ. ನಿಜವಾದ ಯಶಸ್ಸು ಎನ್ನುವುದು ನೊಂದವರ ಪರವಾಗಿ ನಿಂತು ಅವರಿಗೆ ಸಾಂತ್ವನ ಹೇಳಿದಾಗ ಹಾಗೂ ಅವರ ಜವಾಬ್ದಾರಿಯನ್ನು ತೆಗೆದುಕೊಂಡು ಅವರ ಸಮಸ್ಯೆಗೆ ಪರಿಹಾರ ನೀಡುವುದರಲ್ಲಿ ಇರುತ್ತದೆ. ಆ ನಿಟ್ಟಿನಲ್ಲಿ ಸಂಗಮೇಶ ಬಬಲೇಶ್ವರ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಗಣನೀಯ ಸುಧಾರಣೆಗಳನ್ನು ತಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆನ್ನುವ ಭರವಸೆ ನನಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಬುಧವಾರ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಗರದ ಎಕ್ಸಲಂಟ್, ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಗಮೇಶ ಬಬಲೇಶ್ವರ ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನಾ ಸಮಾರಂಭ ಹಾಗೂ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಶಿಸ್ತು, ಸಂಯಮ, ಪ್ರಯತ್ನ, ತಾಳ್ಮೆಗಳು ಯಶಸ್ಸಿನ ಅವಕಾಶಗಳನ್ನು ಹೆಚ್ಚಿಸುತ್ತವೆ. ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮಗೆ ದೊರೆತ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಂಗಮೇಶ ಬಬಲೇಶ್ವರ ಅವರು ಈ ಎಲ್ಲ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಇಂದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಕಾಡೆಮಿಯ ಅಧ್ಯಕ್ಷರಾದಾಗಿನಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನವರತವಾಗಿ ಶ್ರಮಿಸುತ್ತಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಈ ನಾಡಿನ ಮಕ್ಕಳು ಸದಾ ಸ್ಮರಿಸುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಕ್ಸಲಂಟ್ ಎನ್ನುವ ಸಂಸ್ಥೆಯು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ವಿಜಯಪುರ ನಗರವನ್ನು ಮೀರಿ ಧಾರವಾಡದಂತ ನಗರದಲ್ಲಿಯೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಹೆಮ್ಮೆಯ ವಿಷಯ. ಈ ರೀತಿಯ ಬೆಳವಣಿಗೆಗಾಗಿ ಅವಿರತ ಶ್ರಮಿಸಿದ ಹಾಗೂ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ತಯಾರು ಮಾಡುತ್ತಿರುವ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ಅತ್ಯುತ್ತಮವಾದ ಯುವ ಪೀಳಿಗೆಯನ್ನು ನಿರ್ಮಾಣ ಮಾಡಬೇಕೆಂದು ಹೇಳಿದರು.
ವಿಷವನ್ನು ಸಹ ಅಮೃತವನ್ನಾಗಿ ಪರಿವರ್ತಿಸುವ ಶಕ್ತಿ ಶಿಕ್ಷಣಕ್ಕಿದೆ. ಅಂಥಹ ಅಮೃತವನ್ನುಣಿಸವ ಕಾರ್ಯವನ್ನು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾಡುತ್ತಿದ್ದಾರೆ. ಯಾವುದೇ ಮಗುವಿಗೂ ಕೂಡ ಅನಾಥ ಪ್ರಜ್ಞೆ ಕಾಡದಂತೆ ಬೆಳೆಸಬೇಕು. ಆ ನಿಟ್ಟಿನಲ್ಲಿ ಬಾಲ ವಿಕಾಸ ಅಕಾಡೆಮಿಯ ಯೋಜನೆಗಳು ಸಮಾಜದ ಕಟ್ಟ ಕಡೆಯ ಮಗುವಿಗೂ ತಲುಪಿಸವ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡಿದ್ದೇನೆ. ನನ್ನ ವಿದ್ಯಾಗುರುಗಳಾದ ಬಸವರಾಜ ಕೌಲಗಿ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಈ ಸಂಭ್ರಮಾಚರಣೆಯನ್ನು ಕರುನಾಡಿನ ಎಲ್ಲ ಮುದ್ದು ಮಕ್ಕಳಿಗೆ ಅರ್ಪಿಸುತ್ತೇನೆ.
-ಸಂಗಮೇಶ ಬಬಲೇಶ್ವರ ಅಧ್ಯಕ್ಷರು ಬಾಲ ವಿಕಾಸ ಅಕಾಡೆಮಿ ಧಾರವಾಡ
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಎನ್. ಎಂ. ಬಿರಾದಾರ ಅವರು; ನಾಯಕ ಹುಲಿಯಾಗಿದ್ದರೆ ಕುರಿಗಳೊಂದಿಗೆ ತಂಡ ಕಟ್ಟಿಕೊಂಡು ಗೆಲ್ಲಬಹುದು. ಸಂಗಮೇಶ ಬಬಲೇಶ್ವರ ಅವರು ಸಹ ಅಂಥಹ ನಾಯಕತ್ವದ ಗುಣವನ್ನು ಹೊಂದಿದ್ದಾರೆ. ಒಂದು ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದರೆಂದರೆ ಅದನ್ನು ಮಾಡುವ ವರೆಗೂ ವಿಶ್ರಮಿಸದಂತ ಛಲಗಾರನಾಗಿರುವ ಇವರು ಕೇವಲ ತಾನು ಮಾತ್ರ ಬೆಳೆಯುವುದಿಲ್ಲ; ತನ್ನ ಜೊತೆಗಿದ್ದವರನ್ನು ಸಹ ಬೆಳೆಸುವ ವ್ಯಕ್ತಿತ್ವವನ್ನು ಹೊಂದಿದ್ದು ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ನಾಡಿನುದ್ದಕ್ಕೂ ಸಂಚಾರ ಮಾಡಿ, ಅನೇಕ ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ. ಅನಾಥ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಶರಣ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಕಾಯಕ ತತ್ವದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದಕ್ಕೆ ಸಾಕ್ಷಿ ಎನ್ನುವಂತೆ ಅಕಾಡೆಮಿಯೂ ಮತ್ತೊಂದು ಹಂತಕ್ಕೆ ತಲುಪಿದೆ. ದೇವರು ಇವರಿಗೆ ಹೆಚ್ಚಿನ ಆಯಸ್ಸು ಹಾಗೂ ದುಡಿಯುವ ಹುಮ್ಮಸ್ಸು ನೀಡಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅವರು; ರಾಜ್ಯದ ಮಕ್ಕಳ ಆಶಾ ಕಿರಣವಾಗಿರುವ ಸಂಗಮೇಶ ಬಬಲೇಶ್ವರ ಅವರು ಇಂದು ಬಾಲ ವಿಕಾಸ ಅಕಾಡೆಮಿಯ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಕಾರ್ಯ ಮಾಡುತ್ತಿರುವ ಇವರಿಗೆ ನಮ್ಮ ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಮಲೆನಾಡು ಶಿಕ್ಷಣ ಸಂಸ್ಥೆ ನಿಗದಿಯ ಅಧ್ಯಕ್ಷ ಮಲ್ಲನಗೌಡ ಎಸ್ ಪಾಟೀಲ, ಹೊಟೆಲ್ ಉದ್ದಿಮೆದಾರ ಶಾಂತೇಶ ಕಳಸಗೊಂಡ, ವಿಡಿಸಿಸಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ವಿ.ಡಿ.ಮಾದನಶೆಟ್ಟಿ, ಎಕ್ಸಲಂಟ್ ಸಂಸ್ಥೆಯ ಗೌರವ ಸದಸ್ಯ ರಾಜೇಶೇಖರ ಕೌಲಗಿ, ಉಪನ್ಯಾಸಕ ಶಿವಾನಂದ ಕಲ್ಯಾಣಿ ಅವರು ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು. ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕತಕನಳ್ಳಿಯ ಮಾತೋಶ್ರಿ ಶಂಕ್ರೆಮ್ಮತಾಯಿ ಪ್ರಾಥಮಿಕಶಾಲೆ, ಆಕ್ಸಫರ್ಡ ಶಾಲಾ ಸೇರಿದಂತೆ ಎಕ್ಸಲಂಟ ಸಮೂಹ ಶಿಕ್ಷಣ ಸಂಸ್ಥೆಗಳ, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಶರಣಗೌಡ ಪಾಟೀಲ್ ನಿರೂಪಿಸಿದರು, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸ್ವಾಗತಿಸಿದರು.