ಅಧಿವೇಶನದಲ್ಲಿ ಗಮನಸೆಳೆದ ಶಾಸಕ ಯತ್ನಾಳ : ವಿಜಯಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಘೋಷಣೆ

MLA Yatnal drew attention in the session: Announcement of a medical college for Vijayapura district

Aug 22, 2025 - 23:04
 0
ಅಧಿವೇಶನದಲ್ಲಿ ಗಮನಸೆಳೆದ ಶಾಸಕ ಯತ್ನಾಳ : ವಿಜಯಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಘೋಷಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಿಸುವಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರ್ಕಾರದ ಗಮನಸೆಳೆದು ಒತ್ತಾಯಿಸಿದ್ದರಿಂದ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ರವರು ಪಿಪಿಪಿ ಮಾದರಿಯಲ್ಲಿ ವಿಜಯಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಿಸುವುದಾಗಿ ಘೋಷಣೆ ಮಾಡಿದ್ದಾರೆ.

ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ಸುಮಾರು 149 ಎಕರೆ 12 ಗುಂಟೆ ವಿಸ್ತೀರ್ಣದಲ್ಲಿದ್ದು, ಕರ್ನಾಟಕದಲ್ಲಿ ಇಷ್ಟೊಂದು ಸ್ವಂತ ಜಾಗ ಹೊಂದಿರುವ ಏಕೈಕ ಸರ್ಕಾರಿ ಆಸ್ಪತ್ರೆ ಆಗಿದೆ. ಪ್ರತಿ ದಿನಕ್ಕೆ ಅಂದಾಜು 1,500ಕ್ಕೂ ಹೆಚ್ಚು ಒಳ ರೋಗಿ ಹಾಗೂ ಹೊರರೋಗಿಗಳ ದಾಖಲಾತಿ ಇರುತ್ತದೆ. ಪ್ರಸ್ತುತ ವಿಜಯಪುರ ನಗರವು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಜಿಲ್ಲೆಯ 13 ತಾಲ್ಲೂಕುಗಳು ಹಾಗೂ ಹತ್ತಿರದ ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಯ ಅನೇಕ ಗ್ರಾಮಗಳಿಂದ ಹಾಗೂ ಗಡಿ ಭಾಗದಿಂದಲೂ  ಬರುವ ರೋಗಿಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ನುರಿತ ತಜ್ಞರಿಂದ ಉಪಚಾರ ನೀಡಲಾಗುತ್ತಿದೆ.

ಈ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ದೊಡ್ಡ ಕಟ್ಟಡ, ಪಂಚಕರ್ಮ ಮತ್ತು ಪ್ರಕೃತಿ ಚಿಕಿತ್ಸಾಲಯ ಸೌಲಭ್ಯ ಕಟ್ಟಡ, 670 ಬೆಡ್ ಗಳ ಜನರಲ್ ಆಸ್ಪತ್ರೆ, 150 ಬೆಡ್ ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 60 ಬೆಡ್ ಗಳ ಟ್ರೋಮಾ ಸೆಂಟರ್, ತುರ್ತು ನಿಗಾ ಘಟಕ, ಆಕ್ಸಿಜನ್ ಪ್ಲಾಂಟ್, ತುರ್ತು ಅಪಘಾತ ಘಟಕ, ಹೈಟೆಕ್ ಶವಾಗೃಹ ಸಾರ್ವಜನಿಕರ ಸೇವೆಯಲ್ಲಿದೆ. ಈಗಾಗಲೇ ಬಿ.ಎಸ್.ಸಿ ನರ್ಸಿಂಗ್ ಕಾಲೇಜು ಇತರೆ ವೃತ್ತಿಪರ ಪ್ಯಾರಾ ಮೆಡಿಕಲ್ ಕೋರ್ಸ್ ಕಟ್ಟಡ ಹೊಂದಿ, ಕಾರ್ಯನಿರ್ವಹಿಸುತ್ತಿವೆ.

ಇಷ್ಟೆಲ್ಲಾ ಸೌಲಭ್ಯಗಳನ್ನು ಹೊಂದಿರುವ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 131  ಎಕರೆ 31 ಗುಂಟೆ ಖಾಲಿ ಜಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಿಸಲು ಜಿಲ್ಲಾಸ್ಪತ್ರೆಯಿಂದ 2018 ರಿಂದಲೇ ಪ್ರಸ್ತಾವನೆ ಸಲ್ಲಿಸುತ್ತಿದ್ದರೂ ಮಂಜೂರಿಸಿರಲಿಲ್ಲ. ಈ ಭಾಗದ ವಿದ್ಯಾರ್ಥಿಗಳ ಅನುಕೂಲ ದೃಷ್ಟಿಯಿಂದ ವಿಜಯಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಿಸುವಂತೆ ಚುಕ್ಕೆ ಗುರುತು ಪ್ರಶ್ನೆ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಸರ್ಕಾರದ ಗಮನಸೆಳೆದಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂಧಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ರವರು ಪಿಪಿಪಿ ಮಾದರಿಯಲ್ಲಿ ವಿಜಯಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಿಸುವುದಾಗಿ ಘೋಷಣೆ ಮಾಡಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.