ನಗರದಲ್ಲಿ ೨೨೫೭ ಕ್ಕೂ ಹೆಚ್ಚು ಮನೆ ನಿರ್ಮಾಣ : ಸಿಎಂ ಸಿದ್ದರಾಮಯ್ಯಗೆ ಶಾಸಕ ಯತ್ನಾಳ ಪತ್ರ

Jun 20, 2025 - 11:49
 0
ನಗರದಲ್ಲಿ ೨೨೫೭ ಕ್ಕೂ ಹೆಚ್ಚು ಮನೆ ನಿರ್ಮಾಣ : ಸಿಎಂ ಸಿದ್ದರಾಮಯ್ಯಗೆ ಶಾಸಕ ಯತ್ನಾಳ ಪತ್ರ

ವಿಜಯಪುರ: ವಸತಿ ರಹಿತ ಬಡ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಪ್ರಧಾನಮಂತ್ರಿ ಅವಾಸ ಯೋಜನೆಯಡಿ ೨,೨೫೭ ಗುಂಪು ಮನೆಗಳ ಹೊಸ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಪತ್ರ ಬರೆದಿದ್ದಾರೆ.

           ಪ್ರಧಾನಮಂತ್ರಿ ಆವಾಸ ಯೋಜನೆಯಡಿ ವಿಜಯಪುರ ನಗರಕ್ಕೆ ಮಂಜೂರಾದ ೩,೭೫೦ ಮನೆಗಳ ಪೈಕಿ ಈಗಾಗಲೇ ೧,೪೯೩ ಮನೆಗಳು ಅನುಮೋದನೆಗೊಂಡು ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಅಂತಿಮ ಹಂತದಲ್ಲಿದ್ದು, ಇನ್ನೂ ಸಾಕಷ್ಟು ಬಡ ಫಲಾನುಭವಿಗಳಿಗೆ ಬಾಕಿ ಉಳಿದ ೨,೨೫೭ ಮನೆಗಳು ಅವಶ್ಯಕತೆ ಇರುತ್ತದೆ. ಈಗಾಗಲೇ ಈ ಬಡ ಫಲಾನುಭವಿ ಕುಟುಂಬಗಳು ಮನೆಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ್ದು, ಈ ಫಲಾನುಭವಿಗಳನ್ನು ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ.      

 ಪ್ರಸ್ತುತ ನಿರ್ಮಾಣಗೊಳ್ಳುತ್ತಿರುವ ೧,೪೯೩ ಮನೆಗಳು ಮಹಾನಗರ ಪಾಲಿಕೆಯ ಜಾಗದಲ್ಲಿ ಜಿ+೨ ಮಾದರಿಯಲ್ಲಿ ೮೦೦ ಮನೆಗಳನ್ನು ನಿರ್ಮಾಣ ಮಾಡಬಹುದಾಗಿದೆ. ಅದರಂತೆ ಮಹಾನಗರ ಪಾಲಿಕೆ ಒಡೆತನದ ಸರ್ವೆ ನಂ.೧೫೬ರ ಭೂತನಾಳ ಕೆರೆ ಹತ್ತಿರ ೩೫.೧೩ ಎಕರೆ ಜಮೀನು ಲಭ್ಯವಿದ್ದು, ಇದನ್ನು ಆಶ್ರಯ ಮನೆ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದ್ದು, ಇಲ್ಲಿಯೂ ಸಹ ಬಾಕಿ ಉಳಿದ ಮನೆಗಳನ್ನು ನಿರ್ಮಾಣ ಮಾಡಬಹುದಾಗಿದೆ.        ಹೀಗಾಗಿ ಬಾಕಿ ಉಳಿದ ೨೨೫೭ ಮನೆಗಳ ಹೊಸ ನಿರ್ಮಾಣದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ನೀಡಿ, ವಿಜಯಪುರ ನಗರ ಹಾಗೂ ನಾಗಠಾಣ ಮತಕ್ಷೇತ್ರದ ವಸತಿ ರಹಿತ ಬಡ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಪತ್ರದಲ್ಲಿ ತಿಳಿಸಿದ್ದಾರೆ. ಇದೇ ವಿಷಯಕ್ಕೆ ಸಂಬAಧಿಸಿದAತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಪತ್ರ ಬರೆಯಲಾಗಿದೆ ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.