ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ : ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ರಾಜಕೀಯವಾಗಿ ಹಿನ್ನಡೆ ಹೊಂದಿದ್ದಾರೆ. ಒಬ್ಬ ನಾಯಕ ಇನ್ನೊಬ್ಬ ನಾಯಕನನ್ನು ಸೃಷ್ಟಿಸಬೇಕು ಎಂದು ಟಿಪ್ಪು ಕ್ರಾಂತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗಿರ ಮುಲ್ಲಾ ಹೇಳಿದರು.
ತಾಲೂಕಿನ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಇವರ ವತಿಯಿಂದ ಲೊಯೋಲ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಯುವಕ/ಯುವತಿಯರಿಗೆ ಒಂದು ದಿನದ ಯುವ ಸಂಗಮ ಕಾರ್ಯಗಾರದಲ್ಲಿ ಮಾತನಾಡಿದರು.
ಡಾ. ಬಿ.ಆರ್‌ಅಂಬೇಡ್ಕರವರು ಸಂವಿಧಾನದ ಮುಖಾಂತರ ಎಲ್ಲಾ ವರ್ಗದವರಿಗೆ ಸಮಾನವಾಗಿ ಸೌಲಭ್ಯ ಮತ್ತು ಕಾನೂನು ಕೊಟ್ಟಿದ್ದಾರೆ. ಆದರೂ ಹೆಣ್ಣು ಮಕ್ಕಳ ಮೇಲೆ ಸತತ ದೌರ್ಜನ್ಯ ನಡೆಯುತ್ತಿದೆ. ದುರ್ಬಲರು ದುರ್ಬಲರಾಗಿ ಉಳಿಯುತ್ತಿದ್ದಾರೆ. ನಮ್ಮ ಭಾವನೆಗಳು ಬದಲಾಗಬೇಕು ಮತ್ತು ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಭಾರತೀಯರು ಎಂಬ ಭಾವನೆ ಹುಟ್ಟಬೇಕು. ಮೊದಲು ನಾವು ನಮ್ಮ ನಮ್ಮ ಕುಟುಂಬಗಳಲ್ಲಿ ಒಳ್ಳೆಯ ನಾಯಕರಾಗುವ. ನಮ್ಮ ಹಳ್ಳಿಯಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ, ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ, ಚುನಾವಣೆಗಳಲ್ಲಿ ಸ್ಪರ್ದಿಸಿ ಅಭಿವೃದ್ಧಿ ಕೆಲಸಗಳನ್ನು ನಿಷ್ಠೆಯಿಂದ ಮಾಡುವ, ಸೇವಾ ಮನೋಭಾವ ಬೆಳೆಸಿಕೊಳ್ಳುವ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಸಂಗಮ ಸಂಸ್ಥೆ ನಿರ್ದೇಶಕ ಫಾದರ್ ಸಂತೋಷ್ ಮಾತನಾಡಿ ಯುವಕ/ಯುವತಿಯರು ಯುವ ಸಂಗಮದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕು. ತಮ್ಮ ಸುತ್ತಮುತ್ತಲಿನ ಜನರಿಗೆ ಮಾದರಿಯಾಗಬೇಕು. ತಮ್ಮೊಂದಿಗೆ ಇತರರನ್ನು ಬೆಳೆಸುವ ಗುಣಗಳನ್ನು ಮೈಗೂಡಿಸಬೇಕು. ಎಲ್ಲಾ ವರ್ಗದ ಜನರು ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕಬೇಕು, ಸರ್ಕಾರಿದಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒಳ್ಳೆಯದಕ್ಕೆ ಬಳಸಿ ಜೀವನದಲ್ಲಿ ಮುಂದೆ ಬರಬೇಕು ಎಂದು ವಿಚಾರಗಳನ್ನು ಕಾರ್ಯಗಾರದಲ್ಲಿ ಹಂಚಿಕೊAಡರು.
ಸಂಗಮ ಸಂಸ್ಥೆ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ ನಾವು ಸ್ಥಳೀಯ ಸರ್ಕಾರವನ್ನು ಪ್ರಶ್ನಿಸುವವರಾಗಬೇಕು. ಸರ್ಕಾರದಿಂದ ಗ್ರಾಮ ಪಂಚಾಯತಿಗೆ ಬರುವ ಅನುಧಾನದ ಸರಿಯಾದ ಬಳಕೆ ಆಗುವಂತೆ ನಾವು ಖಾತ್ರಿಪಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಲೋಯೊಲ ಶಾಲೆಯ ಶಿಕ್ಷಕರು ಮತ್ತು ವಿತ್ತ ಅಧಿಕಾರಿ ಫಾದರ್ ಜೀವನ್ ಡಿಸೋಜ, ಸುಹಾಸಿನಿ ದೊಡಮನಿ, ಪೂಜ್ಯ ಚೆನ್ನಣ್ಣಗೊಂಡ, ಆಕಾಶ್ ಹೊಸಮನಿ, ಶಿವಕುಮಾರ್ ಚೋರಗಸ್ತಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ರಾಜೀವ ಕುರಿಮನಿ ನಿರೂಪಿಸಿದರು, ಮಲಕಪ್ಪ ಹಲಗಿ ಸ್ವಾಗತಿಸಿದರು. ಮಹೇಶ್ ಚವ್ಹಾಣ ವಂದಿಸಿದರು. ವಿವಿಧ ಹಳ್ಳಿಗಳಿಂದ ಆಗಮಿಸಿದ ೭೭ ಯುವಕ, ಯುವತಿಯರು ಮತ್ತು ಸಂಗಮ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.