ಇಂದಿರಾ ಕ್ಯಾಂಟೀನುಗಳು ಹಸಿದ ಹೊಟ್ಟೆಗೆ ಆಹಾರದ ತಟ್ಟೆಗಳಾಗಿವೆ : ಸಚಿವ ಎಂ. ಬಿ. ಪಾಟೀಲ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ಇಂದಿರಾ ಕ್ಯಾಂಟೀನುಗಳು ಹಸಿದ ಹೊಟ್ಟೆಗೆ ಆಹಾರದ ತಟ್ಟೆಗಳಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಿದ್ದಾಂತಗಳಿಗೆ ತಕ್ಕಂತೆ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಇತರರಿಗೆ ವರದಾನವಾಗಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ಮುಸ್ಸಂಜೆ ಬಬಲೇಶ್ವರ ಪಟ್ಟಣದಲ್ಲಿರುವ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು.
ಬಬಲೇಶ್ವರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಂದಿರುವ ಮತ್ತು ಗುಣಮಟ್ಟದ ಆಹಾರ ತಯಾರಿಸುವ ಅಡುಗೆ ಮಾಡುವ ವ್ಯವಸ್ಥೆಯಿದೆ. ಇದು ಈ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಬೇರೆ ಊರುಗಳಿಂದ ಬರುವ ಸುಮಾರು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಬಡವರಿಗೆ ಅತೀ ಕಡಿಮೆ ದರದಲ್ಲಿ ಆಹಾರ ಒದಗಸುವ ಮೂಲಕ ವರದಾನವಾಗಿದೆ ಎಂದು ಅವರು ಹೇಳಿದರು.
ಬಡವರ ಬಗ್ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೊಂದಿದ್ದ ಕಳಕಳಿ, ಅವರು ಬಡತನ ನಿರ್ಮೂಲನೆಗಾಗಿ ರೂಪಿಸಿದ್ದ ಗರೀಬಿ ಹಠಾವೋ, ರೋಟಿ, ಕಪಡಾ ಔರ್ ಮಕಾನ್ ಯೋಜನೆಗಳು ಇಂದಿಗೂ ಇತರರಿಗೆ ಮಾದರಿಯಾಗಿವೆ. ಹೀಗಾಗಿ ಅವರ ಗೌರವಾರ್ಥ ರಾಜ್ಯ ಸರಕಾರ ಈ ಕ್ಯಾಂಟೀನುಗಳಿಗೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಟ್ಟಿದೆ. ಈಗ ಈ ಕ್ಯಾಂಟೀನುಗಳು ಬಡವರ ಹಸಿವು ನೀಗಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು, ಇಂದಿರಾ ಗಾಂಧಿಯವರ ಕನಸಿನ ಸಾಕಾರ ಮತ್ತು ಬಡವರ ನಿತ್ಯ ಆಹಾರ ಭದ್ರತೆಗೆ ಜೀವಂತ ಪ್ರಮಾಣವಾಗಿವೆ. ಇಂದಿರಾ ಕ್ಯಾಂಟೀನ್ ಗಳು ಒಂದು ಯೋಜನೆಯಷ್ಟೇ ಅಲ್ಲ, ಇದು ‘ಯಾರೊಬ್ಬರೂ ಹಸಿವಿನಿಂದ ಮಲಗಬಾರದು’ ಎಂಬ ಸಂಕಲ್ಪ ವನ್ನು ಸಾಕಾರಗೊಳಿಸುವ ಯೋಜನೆಯಾಗಿದೆ ಎಂದು ಅವರು ಹೇಳಿದರು.
ಬಬಲೇಶ್ವರದ ಸಮಗ್ರ ಅಭಿವೃದ್ಧಿಗೆ ಸತತ ಶ್ರಮಿಸುತ್ತ ಬಂದಿದ್ದೇನೆ. ಈ ಪಟ್ಟಣಕ್ಕೆ ತಾಲೂಕಿನ ಸ್ಥಾನಮಾನ ಒದಗಿಸಿದ್ದೇನೆ. ತಾಲೂಕು ಕೇಂದ್ರವಾದ ಬಳಿಕ ಅಗತ್ಯವಾದ ಸರಕಾರಿ ಕಚೇರಿಗಳಾದ ಮಿನಿ ವಿಧಾನಸೌಧ, ಪಟ್ಟಣ ಪಂಚಾಯಿತಿ ಕಟ್ಟಡ, ಹೊಸ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ತಾಲೂಕು ಆಸ್ಪತ್ರೆ, ತಾಲೂಕು ಕ್ರೀಡಾಂಗಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಬಾಕಿ ಕಾರ್ಯಗಳು ಪ್ರಗತಿಯಲ್ಲಿವೆ. ನೀರಾವರಿ, ವಿದ್ಯುತ್ ಕೇಂದ್ರಗಳ ಸ್ಥಾಪನೆ, ಶಿಕ್ಷಣಕ್ಕೆ ಆರ್ಥಿಕ ನೆರವು, ರಸ್ತೆಗಳ ಅಭಿವೃದ್ಧಿ ಮಾಡುವ ಮೂಲಕ ಬಬಲೇಶ್ವರ ಮತಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ಸಚಿವರು ನಾವು ಕೇಳದಿದ್ದರೂ ಎಲ್ಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರಕಾರಿ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಿದ್ದಾರೆ. ಈ ಮೂುಲಕ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷರಾದ ಬಸವರಾಜ ದೇಸಾಯಿ, ಸುಜಾತಾ ಕಳ್ಳಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರನಗೌಡ ಬಿರಾದಾರ, ಮುಖಂಡರಾದ ಬಿ. ಜಿ. ಬಿರಾದಾರ, ಡಾ. ಕೆ. ಎಚ್. ಮುಂಬಾರೆಡ್ಡಿ, ಮಲ್ಲು ದಳವಾಯಿ, ಶಶಿ ಕೋಟ್ಯಾಳ, ಮಹಾದೇವಪ್ಪ ಮದರಖಂಡಿ, ಅಪ್ಪುಗೌಡ ಪಾಟೀಲ ಶೇಗುಣಸಿ, ಉಮೇಶ ಮಲ್ಲಣ್ಣವರ, ತಹಸೀಲ್ದಾರ ಎಸ್. ಎಂ. ಮ್ಯಾಗೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್. ಎಸ್. ಸೋಲಾಪುರ ಮುಂತಾದವರು ಉಪಸ್ಥಿತರಿದ್ದರು.