ಸಂಗಾಪುರ ಎಸ್. ಎಚ್ ಬಳಿ ಜಿನುಗು ಕೆರೆಗೆ ಸಚಿವ ಎಂ. ಬಿ. ಪಾಟೀಲ ಭೂಮಿಪೂಜೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ; ಬಬಲೇಶ್ವರ ಮತಕ್ಷೇತ್ರದಲ್ಲಿ ಯೋಜನೆಗಳಿಗೆ ಅನುಕೂಲವಿರುವ ಎಲ್ಲ ಸ್ಥಳಗಳಲ್ಲಿ ಕೆರೆ ಮತ್ತು ಬಾಂದಾರ ನಿರ್ಮಿಸುವ ಮೂಲಕ ನೀರಾವರಿ ಮಾಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಶನಿವಾರ ಮುಸ್ಸಂಜೆ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ರೂ. 220 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಿನುಗು ಕೆರೆ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಈಗಾಗಲೇ ಯೋಜನೆಗಳಿಗೆ ಸೂಕ್ತವಾದ ಪ್ರದೇಶಗಳಲ್ಲಿ 32 ಕೆರೆಗಳು, 5 ಬ್ರಿಡ್ಜ್ ಕಮ್ ಬಾಂದಾರ ಹಾಗೂ 100 ಬಾಂದಾರಗಳು ನಿರ್ಮಿಸಲಾಗಿದೆ. ಸಂಗಾಪುರ ಎಸ್. ಎಚ್. ಗ್ರಾಮಕ್ಕೆ ಅಗತ್ಯವಾಗಿರುವ ಮತ್ತೋಂದು ಕೆರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಬಳಿ ಅಗತ್ಯವಾಗಿರುವ ಸೇತುವೆ ನಿರ್ಮಾಮ ಯೋಜನೆಯನ್ನು ಈಗಾಗಲೇ ನಬಾರ್ಡ್ ಯೋಜನೆಯಡಿ ಸೇರಿಸಲಾಗಿದೆ. ಪ್ರಗತಿಪಥ ಯೋಜನೆಯಡಿ ಇನ್ನೋಂದು ರಸ್ತೆ ನಿರ್ಮಿಸಲಾಗುವುದು. ಸಂಗಾಪುರ ಎಸ್. ಎಚ್. ಗ್ರಾಮ ಸಣ್ಣದಾದರೂ ಇಲ್ಲಿನ ಜನ ಶ್ರಮಜೀವಿಗಳಾಗಿದ್ದು, ಕೃಷಿಗೆ ಆದ್ಯತೆ ನೀಡುವ ಮೂಲಕ ಬಾಳನ್ನು ಹಸನು ಮಾಡಿಕೊಂಡಿದ್ದಾರೆ. ಗ್ರಾಮಸ್ಥರಗಿ ನನ್ನ ಬಗ್ಗೆ ಅಪಾರ ಕಾಳಜಿಯಿದ್ದು, ನನಗೂ ಗ್ರಾಮದ ಮೇಲೆ ಅವರಷ್ಟೇ ಪ್ರೀತಿಯಿದೆ. ಗ್ರಾಮದ ಮಠದ ಬಾಕಿ ಕಾಮಗಾರಿಗೆ ಅನುದಾನ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಂಗಾಪುರ ಎಸ್. ಎಚ್. ಗ್ರಾಮದ ಮುಖಂಡ ರಮೇಶ ಬದ್ರಿ ಮಾತನಾಡಿ, ಗ್ರಾಮಸ್ಥರು ಪ್ರತಿಬಾರಿಯೂ ಸಚಿವ ಎಂ. ಬಿ. ಪಾಟೀಲ ಅವರಿಗೆ ಹೆಚ್ಚೆಚ್ಚು ಬೆಂಬಲ ನೀಡುತ್ತ ಬಂದಿದ್ದಾರೆ. ಹೀಗಾಗಿ ಅವರು ನಮ್ಮ ಸಣ್ಣ ಗ್ರಾಮಸ್ಥರ ಬೇಡಿಕೆಗೆ ಸಕಲ ರೀತಿಯಿಂದಲೂ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಕಮರಿಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಬಸವನಾಡಿನ ಭಗೀರಥರಾಗಿದ್ದು, ತಮಗೆ ವಹಿಸಿರುವ ಪ್ರತಿಯೊಂದು ಖಾತೆಗೆ ನ್ಯಾಯ ಒದಗಿಸುವ ಮೂಲಕ ಆ ಖಾತೆಗಳಿಗೆ ಮೆರಗು ತರುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯ ಹೆಸರನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಸಾಹೇಬಗೌಡ ಬಿರಾದಾರ ಮಾತನಾಡಿ, 4.50 ಎಕೆರೆ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಈ ಕೆರೆಯು ಸುಮಾರು 125ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಆನಂದಕುಮಾರ ಸಿ. ದೇಸಾಯಿ, ಮುಖಂಡರಾದ ಮುತ್ತಪ್ಪ ಶಿವಣ್ಣವರ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಚನ್ನಪ್ಪ ಕೊಪ್ಪದ, ವಿ. ಎಸ್. ಪಾಟೀಲ, ಬಸವರಾಜ ದೇಸಾಯಿ, ಮಲ್ಲು ದಳವಾಯಿ, ಜಗದೀಶ ಹಿರೆದೇಸಾಯಿ ಜೈನಾಪುರ, ಶಂಕರಗೌಡ ಪಾಟೀಲ, ಅಪ್ಪುಗೌಡ ಪಾಟೀಲ ಶೇಗುಣಸಿ, ಡಾ. ಕೆ. ಎಚ್. ಮುಂಬಾರೆಡ್ಡಿ, ಮಹಾದೇವಪ್ಪ ಮದರಖಂಡಿ, ರಾಮಲಿಂಗ ಕೊಕಟನೂರ, ರಾಜು ಬಡ್ರಿ ಮುಂತಾದವರು ಉಪಸ್ಥಿತರಿದ್ದರು.