ಪ್ರತಿಯೊಬ್ಬರಿಗೂ ಪರಿಸರದ ಅರಿವು ಅಗತ್ಯ: ಮಿಂಚಿನಾಳ.

ದೇವರಹಿಪ್ಪರಗಿ: ಪರಿಸರಕ್ಕೆ ಧಕ್ಕೆ ಮಾಡುವ ಮನುಷ್ಯನಿಗೆ ಇದು ಮಾನವ ಕುಲದ ಬೆಳವಣಿಗೆಗೆ ಧಕ್ಕೆ ಎಂಬ ಅರಿವು ಮೂಡಿದರೆ ಮಾತ್ರ ಬದಲಾವಣೆ ಸಾಧ್ಯ. ಕಳೆದ 44 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದಕ್ಕಾಗಿ ಜನಜಾಗೃತಿ ಮೂಡಿಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಪಂಚಾಕ್ಷರಿ ಮಿಂಚಿನಾಳ ಹೇಳಿದರು.
ಪಟ್ಟಣದ ಹತ್ತಿರ ಇರುವ ತಾಂಡಾದ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಜನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಣ್ಣಿನ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಸಂಸ್ಥೆಯ ತಾಲೂಕು ಕೃಷಿ ಮೇಲ್ವಿಚಾರಕ ಅಧಿಕಾರಿಗಳಾದ ಸುರೇಶ ಅವರು ಮಾತನಾಡಿ, ಧರ್ಮಸ್ಥಳ ಸಂಸ್ಥೆ ಇಡೀ ರಾಜ್ಯದಲ್ಲಿ ಕೆರೆಗಳ ಹೂಳೆತ್ತುವುದು, ಕೃಷಿ ಅಭಿವೃದ್ಧಿಪಡಿಸುವುದು, ಪರಿಸರ ಸಂರಕ್ಷಿಸುವುದು, ಮಂದಿರಗಳ ಜೀಣೋದ್ಧಾರವೂ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯದಲ್ಲಿ ಮುಂದಿದೆ. ಸರ್ಕಾರದ ಜತೆಗೆ ಸಂಸ್ಥೆಯೂ ಒಂದು ಭಾಗವಾಗಿ ಜನಹಿತಕ್ಕೆ ಮುಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು, ಕೃಷಿಕರನ್ನೊಳಗೊಂಡು ಇಂತಹ ಜಾಗೃತಿ ಅತ್ಯಂತ ಯಶಸ್ವಿಯಾಗುತ್ತಿದೆ. ಒಂದು ಊರಿನ ಸೊಗಸು ಆ ಊರಿನ ದೇವಸ್ಥಾನ, ಕೆರೆ, ಶಾಲೆ, ಆಸ್ಪತ್ರೆಗಳ ಸುವ್ಯವಸ್ಥೆಯನ್ನು ಅವಲಂಬಿಸಿದೆ. ಇದೆಲ್ಲದರಲ್ಲಿ ಸಾರ್ವಜನಿಕರ ಪಾತ್ರ ಬಹು ಮುಖ್ಯವಾದುದು ಎಂದರು.
ಸಂದರ್ಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ವಿಶ್ವನಾಥ,ಪ.ಪಂ ಸದಸ್ಯರ ಪ್ರತಿನಿಧಿಯಾದ ವಿನೋದ್ ರಾಠೋಡ,ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆರ್.ಎಸ್.ಒಡೆಯರ್, ಎನ್.ಆರ್,ಗಾಗಜಿ, ಎಸ್.ಎಸ್.ಪವಾರ,ಸ್ವಸಹಾಯ ಸಂಘದ ಸದಸ್ಯರುಗಳಾದ ಮಹಾನಂದ ಹೊಸಮನಿ, ಉಜ್ವಲ ಸಂಸ್ಥೆಯ ಗೌಡಪ್ಪ ಬಿರಾದಾರ, ಸೇವಾ ಪ್ರತಿನಿಧಿಗಳಾದ ರೇಣುಕಾ ಬಿರಾದಾರ, ನೀಲಮ್ಮ, ಕಮಲಾ ಸೇರಿದಂತೆ ಪ್ರಮುಖರು, ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.