ಅಕ್ರಮ ಚಟುವಟಿಕೆಗಳ ಮೇಲೆ ಖಾಕಿ ದಾಳಿ : ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘಿಸಿದ ಎಸ್ಪಿ ನಿಂಬರಗಿ

ವಿಜಯಪುರ: ಅಪರಾಧ ಲೋಕದ ಅಕ್ರಮ ಚಟುವಟಿಕೆಗಳ ವಿರುದ್ಧ ಬೆನ್ನತ್ತಿದ್ದ ಗುಮ್ಮಟ ನಗರಿಯ ಖಾಕಿ ಪಡೆ ಗಾಂಜಾ, ಮಾವಾ ಹಾಗೂ ಕಳ್ಳಬಟ್ಟಿ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದ ಖದೀಮರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಅವರು ಬುಧವಾರ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಆದೇಶ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ಮಾರ್ಗದರ್ಶನದೊಂದಿಗೆ ಅಖಾಡಕ್ಕಿಳಿದ ಡಿವೈಎಸ್‌ಪಿ ಬಸವರಾಜ ಯಲಿಗಾರ ನೇತೃತ್ವದ ಅಧಿಕಾರಿಗಳ ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಸಾವಿರಾರು ರೂಪಾಯಿ ಮೌಲ್ಯದ ಗಾಂಜಾ, ಮಾವಾ ಹಾಗೂ ಕಳ್ಳಬಟ್ಟಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಗಾAಜಾ ಮತ್ತು ಮಾವಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ೩೫೧೦೦ ರೂಪಾಯಿ ಮೌಲ್ಯದ ೫.೮೫ ಕೆಜಿ ಗಾಂಜಾ ಹಾಗೂ ೬೦೦ ರೂಪಾಯಿ ಮೌಲ್ಯದ ೫೦ ಗ್ರಾಂ ಮಾವಾ ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಮದ್ಯ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ ೮ ಪ್ರಕರಣಗಳನ್ನು ಭೇದಿಸಿ ೧೦ ಜನರನ್ನು ಬಂಧಿಸಿದ್ದು, ಇದರಲ್ಲಿ ೨೨೮೩೫ ರೂಪಾಯಿ ಮೌಲ್ಯದ ೪೨.೭೧ ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ.
ಇನ್ನು ಕಳ್ಳಬಟ್ಟಿ ಸಾರಾಯಿ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ೧೧ ಪ್ರಕರಣಗಳಲ್ಲಿ ೧೨ ಜನರ ಮೇಲೆ ಕ್ರಮ ಜರುಗಿಸಲಾಗಿದ್ದು ಇವರಿಂದ ೫೫ ಲೀಟರ್ ಕಳ್ಳಟ್ಟಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ದಾಳಿಯಲ್ಲಿ ಕೈಕೊಂಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಶ್ಲಾಘಿಸಿದ್ದಾರೆ.