ಕೃಷ್ಣಾತೀರದಲ್ಲಿ ನಿಧಿಗಳ್ಳರ ಬಂಧನ : ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Jun 18, 2025 - 22:57
 0
ಕೃಷ್ಣಾತೀರದಲ್ಲಿ ನಿಧಿಗಳ್ಳರ ಬಂಧನ : ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಮುದ್ದೇಬಿಹಾಳ ತಾಲ್ಲೂಕಿನ ಮದರಿ ಗ್ರಾಮದಲ್ಲಿ ನಿಧಿಗಾಗಿ ಭೂಮಿ ಅಗೆದಿರುವುದು.

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದ ಹತ್ತಿರ ಕೃಷ್ಣಾ ನದಿ ಮುಳುಗಡೆ ಪ್ರದೇಶದಲ್ಲಿ ನಿಧಿಗಾಗಿ  ಪ್ರಕೃತಿಯನ್ನು ನಾಶಪಡಿಸುತ್ತಿದ್ದ ಖಚಿತ ಮಾಹಿತಿ ತಿಳಿದ ಗ್ರಾಮಸ್ಥರು ಹಾಗೂ ಆಲೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.        

ಘಟನೆ ವಿವರ : ಮದರಿ ಗ್ರಾಮದ ಕೃಷ್ಣಾತೀರದಲ್ಲಿ ಮುಳುಗಡೆ ಪ್ರದೇಶವಿದ್ದು ಅಲ್ಲಿ ಕೆಲವರು ಒಂದು ಜೆಸಿಬಿ ಸಹಾಯದಿಂದ ಪಾಳುಬಿದ್ದ ಕಟ್ಟಡದಲ್ಲಿ ಅಗೆಯುತ್ತಿದ್ದರು. ಈ ವಿಷಯ ತಿಳಿದುಕೊಂಡ ಆಲೂರು ಗ್ರಾಪಂ ಪಿಡಿಒ ರಾಜು ನಾರಾಯಣಿ, ಆಲೂರ ಪಂಚಾಯತಿಯ ಕಾರ್ಯದರ್ಶಿ ಸಂಗಪ್ಪ ಬೆಳಗಲ್ಲ, ಗ್ರಾಮ ಆಡಳಿತ ಅಧಿಕಾರಿ ಸುನೀಲ ಚವ್ಹಾಣ ಮತ್ತಿತರರು ಸ್ಥಳಕ್ಕೆ ತೆರಳಿ ಗಮನಿಸಿದಾಗ ಅಲ್ಲಿ ಜೆ.ಸಿ.ಬಿ ಆಪರೇಟರ್ ಸೇರಿದಂತೆ ಒಟ್ಟು ೬ ಜನರಿದ್ದರು. ಅವರನ್ನು ಗ್ರಾಮಸ್ಥರ ಸಹಕಾರದಿಂದ ಹಿಡಿದು ವಿಚಾರಿಸಿದಾಗ ನಾವು ಇಲ್ಲಿ ನಿಧಿಗೋಸ್ಕರ ಅಗೆಯುತ್ತಿದ್ದೀವಿ ಎಂದು ತಿಳಿಸಿದ ಕೂಡಲೇ ಅವರನ್ನು ಗ್ರಾಮಸ್ಥರೆಲ್ಲ ಹಿಡಿದು ಕೂಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.         

ಪೊಲೀಸರು ಸ್ಥಳಕ್ಕೆ ತೆರಳಿ ಗ್ರಾಮಸ್ಥರ  ಹಾಗೂ ಪಂಚಾಯಿತಿ ಅಧಿಕಾರಿಗಳ ವಶದಲ್ಲಿದ್ದ ಹಡಲಗೇರಿ ಗ್ರಾಮದ ವಿಠಲ ಇಂಡಿ, ಮುದ್ದೇಬಿಹಾಳದ ಶಾರುಖ್‌ಖಾನ್ ಮುಲ್ಲಾ ,ಕಮತಗಿಯ ಅಂಗಯ್ಯ ಪಾಪನಾಳಮಠ , ಕೃಷ್ಣ ಹುಗ್ಗಿ,ರಮೇಶ ವಡ್ಡರ ಜೆಸಿಬಿ ಆಪರೇಟರ್ ಯಲ್ಲಪ್ಪ ಚಲವಾದಿ ಅವರನ್ನು ವಶಕ್ಕೆ ಪಡೆದು ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.             

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಭಾವಿಗಳ ರಕ್ಷಣೆ ? ನಿಧಿಗಳ್ಳತನಕ್ಕೆ ಕುಮ್ಮಕ್ಕು ಕೊಟ್ಟವರು ಪ್ರಭಾವಿಗಳಿದ್ದು ಅವರ ವಿರುದ್ಧ ಪ್ರಕರಣವನ್ನು ದಾಖಲಿಸದೇ ಪ್ರಕರಣದಲ್ಲಿ ಭಾಗಿಯಾದ ಸಾಮಾನ್ಯ ವ್ಯಕ್ತಿಗಳ ಹೆಸರನ್ನು ಸೇರಿಸಲಾಗಿದ್ದು ನಿಜವಾಗಿ ನಿಧಿ ಅಗೆಸಲು ಕರೆಯಿಸಿದ ಪ್ರಭಾವಿಗಳ ಹೆಸರನ್ನು ಪೊಲೀಸರು ಕೈ ಬಿಟ್ಟಿದ್ದಾರೆ ಎಂದು ಗ್ರಾಮದ ವಾಲ್ಮೀಕಿ ಸಮಾಜದ ಮುಖಂಡ ಶಿವು ಕನ್ನೊಳ್ಳಿ ಆರೋಪಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.