ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶ : ರಮೇಶ ಹಲಗಲಿ

Jun 22, 2025 - 08:48
 0
ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶ : ರಮೇಶ ಹಲಗಲಿ
ಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ ೨೨ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸೇನಾ ನಿವೃತ್ತ ಉಪ ಮುಖ್ಯಸ್ಥ ರಮೇಶ ಹಲಗಲಿ ಮಾತನಾಡಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ. ಹಲವಾರು ಮಹಿಳಾ ಸೈನ್ಯಾಧಿಕಾರಿಗಳು ಪರಾಕ್ರಮ ತೋರಿಸಿದ್ದಾರೆ. ಅವರ ಪರಿಶ್ರಮ ನಿಮಗೆ ಪ್ರೇರಣಾದಾಯಕವಾಗಿದೆ. ನಿಮಗೆ ಸೈನ್ಯದಲ್ಲಿ ಮಾನ ಸನ್ಮಾನಗಳು ಸಿಗುತ್ತವೆ. ಉತ್ತಮ ವೇತನವಿದೆ. ನಿಮಗೆ ಸೇನಾ ತರಬೇತಿ ಕೂಡಾ ನೀಡುತ್ತೇವೆ. ನೀವೆಲ್ಲಾ ಸೈನ್ಯ ಸೇರಲು ಸಿದ್ಧರಾಗಿ ಎಂದು ಸೇನಾ ನಿವೃತ್ತ ಉಪ ಮುಖ್ಯಸ್ಥ ರಮೇಶ ಹಲಗಲಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.        

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ ೨೨ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥಾಪನಾ ಭಾಷಣ ಮಾಡಿದ ಅವರು, ಪ್ರಾಮಾಣಿಕತೆ, ಕಾರ್ಯಶೀಲತೆ ಮತ್ತು ಸಾಧನೆ ಮುಂತಾದ ಮೌಲ್ಯಗಳನ್ನು ಪಾಲನೆ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇಂದಿನ ಯುವ ಜನಾಂಗವಾಗಿರುವ ನೀವುಗಳೇ ಮಾದರಿ ಭಾರತದ ನಿರ್ಮಾತೃಗಳು. ನಿಮ್ಮ ಶಕ್ತಿ ಸಾಮರ್ಥ್ಯ ಹಾಗೂ ಪ್ರತಿಭೆಯ ಮೂಲಕ ಗುರಿ ಸಾಧಿಸಲು ಶ್ರಮಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಪ್ರೇರೇಪಣೆ ನೀಡಿದರು.        

ನಾವೆಲ್ಲರೂ ಭಾರತೀಯರು. ನಮ್ಮ ಸೈನ್ಯದ ಬಗೆಗೆ ನಾವು ಹೆಮ್ಮೆ ಪಡಬೇಕು. ಸೈನ್ಯದಲ್ಲಿನ ಶಿಸ್ತು, ಕಠಿಣ ಪರಿಶ್ರಮ ದೇಶ ಪ್ರೇಮದಿಂದ ಸೈನಿಕರು ತಮ್ಮ ಜೀವನದ ಹಂಗು ತೊರೆದು  ವೈರಿ ರಾಷ್ಟçಗಳ ಗಡಿ ಪ್ರವೇಶಿಸಿ ವೈರಿಗಳನ್ನು ಬಗ್ಗುಬಡಿದು ದೇಶದ ಗಡಿ ಕಾಯುತ್ತಾರೆ. ಅವರ ಶ್ರಮಕ್ಕೆ ನಾವು ಹೆಮ್ಮೆ ಪಡಬೇಕು. ಹಿಂದೂ, ಮುಸ್ಲಿಂ ಯಾವುದೇ ಜಾತಿ ಧರ್ಮ ಭೇದ ಭಾವವಿಲ್ಲದೇ ನಾವೆಲ್ಲರೂ ಒಂದು. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ಸಂಸ್ಕೃತಿಯ ಹೆಮ್ಮೆ ಇದೆ. ನಾವು ಯಾವ ಜಾತಿ, ಧರ್ಮ, ಪ್ರದೇಶರವರು ಎಂಬುದರ ಮುಖ್ಯವಲ್ಲ ನಾವೆಲ್ಲರೂ ದೇಶಕ್ಕಾಗಿ ಒಂದಾಗಿ ದುಡಿಯಬೇಕು ಎಂದರು. ನೀವು ನಿಮ್ಮ ವೃತ್ತಿಜೀವನ ರೂಪಿಸಿಕೊಳ್ಳುವ ಸದಾವಕಾಶ ವಿಶ್ವವಿದ್ಯಾಲಯದಲ್ಲಿದೆ. ಅದನ್ನು ಸದುಪಯೋಗ ಪಡೆದುಕೊಂಡು ನಿಮ್ಮ ವೃತ್ತಿ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಜಯ ಸಾಧಿಸಬೇಕಾದರೆ ಸತತ ಪ್ರಯತ್ನ ಹಾಗೂ ಪರಿಶ್ರಮ ಮುಖ್ಯ ಎಂದರು.                    

ಈ ಭಾಗದ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಮಹತ್ತ್ವಾಕಾಂಕ್ಷೆ ಹೊಂದಿ ಸ್ಥಾಪಿತವಾದ ಈ ವಿಶ್ವವಿದ್ಯಾನಿಲಯ, ಇಂದು ತನ್ನ ೨೨ ವರ್ಷದ ಶ್ರೇಷ್ಠ ಶೈಕ್ಷಣಿಕ ಪ್ರಯಾಣವನ್ನು ಹೆಮ್ಮೆಯಿಂದ ನೆರವೇರಿಸುತ್ತಿದೆ. ಆರಂಭದಲ್ಲಿ ಕೇವಲ ೨೬೦ ವಿದ್ಯಾರ್ಥಿನಿಯರೊಂದಿಗೆ ಪ್ರಾರಂಭವಾದ ಈ ಸಂಸ್ಥೆ, ನೇರ ನಿಷ್ಠೆ, ಗುಣಮಟ್ಟದ ಶಿಕ್ಷಣ ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಇಂದು ೪,೦೦೦ ರಿಂದ ೫,೦೦೦ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. 

-ಪ್ರೊ. ಶಾಂತಾದೇವಿ. ಟಿ 
ಹಂಗಾಮಿ ಕುಲಪತಿ ಮಹಿಳಾ ವಿವಿ

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳಾ ವಿವಿ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಹಿಂದಿನ ಕುಲಪತಿಗಳು, ಕುಲಸಚಿವರು, ಕುಲಸಚಿವರು ಮೌಲ್ಯಮಾಪನ, ಆರ್ಥಿಕ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಹಲವು ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.                ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್. ಚಂದ್ರಶೇಖರ ಮಾತನಾಡಿ, ಒಂದೊಳ್ಳೆ ವಿಶ್ವವಿದ್ಯಾನಿಲಯದ ಯಶಸ್ಸು ಅಂದರೆ ಅದು ಸರ್ವರ ಸಾಮೂಹಿಕ ಶ್ರಮದ ಫಲವಾಗಿದೆ. ಈ ವಿಶ್ವವಿದ್ಯಾಲಯದ ಯಶಸ್ಸಿಗೆ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಅಚಲ ಶ್ರಮ ಹಾಗೂ ಬದ್ಧತೆ ಅತ್ಯಂತ ಮಹತ್ವಪೂರ್ಣವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ತಾವು ತೋರಿಸಿರುವ ಸಾಧನೆ, ಶ್ರದ್ಧೆ ಮತ್ತು ಸಮರ್ಪಣೆಯಿಂದ ವಿಶ್ವವಿದ್ಯಾನಿಲಯದ ಹೆಸರಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ ಎಂದರು.        ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ನಿವೃತ್ತ ಬೋಧಕೇತರ ಸಿಬ್ಬಂದಿ ಶ್ರೀದೇವಿ ಬಂಡಗಾರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸಾಧನೆಗಳನ್ನು ಮಾಡಿದ ಬೋಧಕ-ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿನಿಯರು ಅಕ್ಕಮಹಾದೇವಿ ಚಿತ್ರಕಥೆ ಹಿನ್ನೆಲೆಯುಳ್ಳ ಯೋಗ ಪ್ರದರ್ಶನ ನೀಡಿದರು.        

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

       ಕಾರ್ಯಕ್ರಮದಲ್ಲಿ ಬಿಎಡ್ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು.  ಕುಲಸಚಿವ ಶಂಕರಗೌಡ ಸೋಮನಾಳ  ಸ್ವಾಗತಿಸಿದರು. ಅತಿಥಿಗಳನ್ನು ಕಾರ್ಯಕ್ರಮದ ಸಂಯೋಜಕ ಪ್ರೊ.ವಿಷ್ಣು ಎಂ ಶಿಂದೆ ಪರಿಚಯಿಸಿದರು. ಪೊ.್ರಜ್ಯೋತಿ ಉಪಾಧ್ಯೆ ಕಾರ್ಯಕ್ರಮ ನಿರೂಪಿಸಿದರು. ಡಾ. ಕಲಾವತಿ ಕಾಂಬಳೆ ವಂದಿಸಿದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.