ಬೂದಿಹಾಳ - ಪೀರಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಚಿವ ಎಂಬಿಪಿ ಭರವಸೆ

Jul 21, 2025 - 23:06
 0
ಬೂದಿಹಾಳ - ಪೀರಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಚಿವ ಎಂಬಿಪಿ ಭರವಸೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ವಿಜಯಪುರ : ಬೂದಿಹಾಳ - ಪೀರಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ  ಡಾ. ಎಂ. ಬಿ. ಪಾಟೀಲ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾಳಿಕೋಟೆ ತಾಲೂಕಿನ ಕೊಡಗಾನೂರ ಬಳಿ ರೈತರು ಕಳೆದ ೯ ದಿನಗಳಿಂದ ನಡೆಸುತ್ತಿದ್ದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
ರವಿವಾರ ಸಚಿವರು ಕೊಡಗಾನೂರಿನ ಬಳಿ ಧರಣಿ ನಿರತ ರೈತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭ ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ.ಮೋಹನರಾಜ್ ಅವರೊಂದಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ ಸಚಿವರು, 
ಈ ಯೋಜನೆಯ ಕುರಿತು ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ಈ ಯೋಜನೆ ನನ್ನ ಕನಸಿನ ಕೂಸು. ಈ ಹಿಂದೆ ೨೦೧೩-೧೮ ರ ಅವಧಿಯಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ ನೀರು ಹಂಚಿಕೆ ಸಮಸ್ಯೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಈಗಲೂ ನಮ್ಮದೇ ಸರಕಾರ ಅಧಿಕಾರದಲ್ಲಿದ್ದು ನಮ್ಮ ಕನಸಿನ ಈ ಮಹತ್ವದ ಯೋಜನೆಯನ್ನು ಮರುಜೀವಿತಗೊಳಿಸುವ ನಿಟ್ಟಿನಲ್ಲಿ, ಮುಂದಿನ ೩ ತಿಂಗಳೊಳಗೆ ಹೊಲಗಾಲುವೆ ನಿರ್ಮಿಸಲಾಗುವ ಜಮೀನುಗಳ ರೈತರ ಸಹಮತಿಯೊಂದಿಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಪೂರ್ಣಗೊಳಿಸಲಾಗುವುದು. ೪ನೇ ತಿಂಗಳಲ್ಲಿ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು. ೯ ತಿಂಗಳಲ್ಲಿ ಹೊಲಗಾಲುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಿಜಯಪುರದಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯ ಕಾಮಗಾರಿಯ ಬಗ್ಗೆ ಅಧಿಕೃತವಾಗಿ ಘೋಷÀಣೆ ಮಾಡಿಸಲಾಗುವುದು. ರೈತರ ಹಿತರಕ್ಷಣೆ ನಮ್ಮ ಸರಕಾರದ ಆದ್ಯತೆಯಾಗಿದ್ದು, ಅವರ ಕನಸುಗಳನ್ನು ಸಾಕಾರಗೊಳಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಸಚಿವರು ಭರವಸೆ ನೀಡಿದರು. ಅಲ್ಲದೇ, ಈ ಜಿಲ್ಲೆಯಲ್ಲಿ ಈ ಹಿಂದೆ ಜಲಸಂಪನ್ಮೂಲ ಮತ್ತು ಗೃಹ ಸಚಿವರಾಗಿದ್ದ ಎರಡೂ ಅವಧಿಯಲ್ಲಿ ತಾವು ನೀರಾವರಿ ಯೋಜನೆಗಳ ಜಾರಿಗೆ ಕೈಗೊಂಡ ಕ್ರಮಗಳನ್ನು ಅವರು ಎಳೆಎಳೆಯಾಗಿ ತಿಳಿಸಿದರು.
ಆಲಮೇಲದ ವಿರಕ್ತ ಮಠದ ಶ್ರೀ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ನುಡಿದಂತೆ ನಡೆಯುತ್ತಿರುವ ಬಸವ ನಾಡಿನ ಭಗೀರಥ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು, ಬೊಗಸೆ ನೀರು ಕೇಳಿದರೆ ಅವರು ಕೊಡ ನೀರು ತಂದು ಕೊಟ್ಟಿದ್ದಾರೆ. ರೈತರು ಡಿಪಿಆರ್ ಮಾಡುವಾಗ ಅಧಿಕಾರಿಗಳೊಂದಿಗೆ ಸಹಕರಿಸಿರಿ ಎಂದು ಹೇಳಿದರು. ಸಚಿವರ ಭರವಸೆಗೆ ಒಪ್ಪಿದ ರೈತರು ಧರಣಿ ಸತ್ಯಾಗ್ರಹ ಹಿಂಪಡೆದರು. ಇದರಿಂದಾಗಿ ಕಳೆದ ದಿನದಿಂದ ನಡೆಯುತ್ತಿರುವ ರೈತರ ಹೋರಾಟ ಸುಖಾಂತ್ಯ ಕಂಡAತಾಗಿದೆ.
ಈ ಸಂದರ್ಭದಲ್ಲಿ ಆಲಮೇಲ ಸ್ವಾಮೀಜಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ, ರೈತ ಮುಖಂಡರಾದ ಪ್ರಭುಗೌಡ ಲಿಂಗದಳ್ಳಿ, ಬಿ. ಎಸ್. ಪಾಟೀಲ ಯಾಳಗಿ, ಸುಭಾಸ ಛಾಯಾಗೋಳ, ಅರವಿಂದ ಕುಲಕರ್ಣಿ, ಸುರೇಶಬಾಬು ಬಿರಾದಾರ, ಪ್ರಭು ಬಿರಾದಾರ, ಶಿವಪುತ್ರ ಚೌಧರಿ, ಕಾಶಿನಾಥ ತಳವಾರ ಮುಂತಾದವರು ಉಪಸ್ಥಿತರಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.