ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
•ಹೊರಬಂತು ‘ಲಕ್ಷ್ಯ’ ಟ್ರೇಲರ್ ಮತ್ತು ಹಾಡುಗಳು
•ಮಕ್ಕಳ ಚಿತ್ರವಾಗಿ ತೆರೆಗೆ ಬರುತ್ತಿದೆ 90ರ ದಶಕದ ಕಥೆ
ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಮಕ್ಕಳ ಚಿತ್ರ ‘ಲಕ್ಷ್ಯ’ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲಕ್ಷ್ಯ’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
‘ಇದೊಂದು ಉತ್ತರ ಕರ್ನಾಟಕ ಸೊಗಡಿನ ಮಕ್ಕಳ ಚಿತ್ರವಾದರೂ, ಇದರಲ್ಲಿ ಒಂದಷ್ಟು ಗಂಭೀರ ಸಾಮಾಜಿಕ ವಿಷಯಗಳನ್ನು ಹೇಳಿದ್ದೇವೆ. ಮನರಂಜನೆಯ ಜೊತೆಗೇ ಸಾಮಾಜಿಕವಾಗಿ ಚರ್ಚಿಸುವ ವಿಷಯಗಳಿವೆ. ಮಕ್ಕಳನ್ನು ಮುಖ್ಯಪಾತ್ರವಾಗಿಟ್ಟುಕೊಂಡು ಮನಮುಟ್ಟುವ ಕಥೆಯೊಂದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ’
⁃ ಅರ್ಜುನ ಪಿ. ಡೊಣೂರ, ‘ಲಕ್ಷ್ಯ’ ಚಿತ್ರದ ನಿರ್ದೇಶಕ
1990ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ತಯಾರಾದ ‘ಲಕ್ಷ್ಯ’ ಚಿತ್ರಕ್ಕೆ ಉತ್ತರ ಕರ್ನಾಟಕ ಮೂಲದ ಅರ್ಜುನ ಪಿ. ಡೊಣೂರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ‘ಲಕ್ಷ್ಯ’ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಲಹರಿ ವೇಲು, ಸುನೀಲ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ‘ಲಕ್ಷ್ಯ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾದವು.
‘ಲಕ್ಷ್ಯ’ ಚಿತ್ರದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಬಳಿಕ ಮಾತನಾಡಿದ ‘ಲಕ್ಷ್ಯ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಅರ್ಜುನ ಪಿ. ಡೊಣೂರ ‘ಇದೊಂದು ಮಕ್ಕಳ ಚಿತ್ರ. ಕನ್ನಡದಲ್ಲಿ ‘ಲಕ್ಷ್ಯ’ ಎಂದರೆ, ಗಮನ ಕೊಡುವುದು ಎಂಬ ಅರ್ಥವಿದೆ. ಇದು ಮಕ್ಕಳ ‘ಲಕ್ಷ್ಯ’ದ ಕುರಿತು ಮಾಡಲಾದ ಚಿತ್ರ. ಮಕ್ಕಳು ಯಾವ ವಿಷಯಕ್ಕೆ ‘ಲಕ್ಷ್ಯ’ ಕೊಡುತ್ತಾರೆ, ಅದರಿಂದ ಏನಾಗುತ್ತದೆ ಎಂಬುದೇ ಈ ಚಿತ್ರದ ಕಥಾಹಂದರ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ, ಅಲ್ಲಿನ ಕಲಾವಿದರೇ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಲಕ್ಷ್ಯ’ ಮಕ್ಕಳ ಚಿತ್ರವಾಗಿದ್ದರಿಂದ ಬಹುತೇಕ ಮಕ್ಕಳೇ ಚಿತ್ರದ ಪ್ರದಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಯೋಚನೆಯಿದೆ’ ಎಂದು ಮಾಹಿತಿ ನೀಡಿದರು.
ಇನ್ನು ‘ಸಾಮ್ರಾಟ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ‘ಲಕ್ಷ್ಯ’ ಚಿತ್ರದ ಮೂರು ಹಾಡುಗಳಿಗೆ ಆರವ್ ರಿಶಿಕ್ ಸಂಗೀತ ಸಂಯೋಜಿಸಿದ್ದು, ಡಾ. ದೊಡ್ಡರಂಗೇಗೌಡ, ಶಂಕರ ಪಾಗೋಜಿ, ಶಿವಾನಂದ ಭೂಶಿ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ದ ಶಾಸ್ತ್ರೀ, ಮದ್ವೇಶ್ ಭಾರದ್ವಾಜ್, ಚೇತನ್ ನಾಯಕ್ ಮೊದಲಾದವರು ಚಿತ್ರದ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಎಂ. ಬಿ. ಅಳ್ಳಿಕಟ್ಟಿ ಛಾಯಾಗ್ರಹಣ, ಆರ್. ಮಹಾಂತೇಶ್ ಸಂಕಲನವಿದೆ.
‘ಲಕ್ಷ್ಯ’ ಚಿತ್ರದಲ್ಲಿ ನಟರಾದ ಸಂಗಮೇಶ ಉಪಾಸೆ, ಸಂಗಮೇಶ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕದ ಬಾಗಲಕೋಟೆ, ಕೂಡಲ ಸಂಗಮ ಸುತ್ತಮುತ್ತ ‘ಲಕ್ಷ್ಯ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಾಗಿದೆ. ಸದ್ಯ ‘ಲಕ್ಷ್ಯ’ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಇದೇ ಜುಲೈ ಅಥವಾ ಆಗಸ್ಟ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.