ಗಣಿಹಾರ ತಾಂಡಾದ ಮಹಿಳೆ ಕೊಲೆ ಪ್ರಕರಣ : ಆರೋಪಿಗಳಿಗೆ ಜಾಮೀನು ನೀಡದಂತೆ ತಹಶೀಲ್ದಾರ್‌ಗೆ ಮನವಿ

Jul 17, 2025 - 22:58
 0

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ಸಿಂದಗಿ : ತಾಲೂಕಿನ ಗಣಿಹಾರ ತಾಂಡಾದ ದೇವಿಬಾಯಿ ಲಾಲ್ ಸಿಂಗ್ ಜಾಧವ(೪೨) ಎನ್ನುವ ಮಹಿಳೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ತಾಂಡಾದ ನಿವಾಸಿಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದಲ್ಲಿರುವ ತಾಲೂಕು ಆಡಳಿತ ಕಚೇರಿಗೆ ಆಗಮಿಸಿದ ತಾಂಡಾದ ನಿವಾಸಿಗಳು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೂಲಕ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

             
ಆರೋಪಿಗಳಿಗೆ ಜಾಮೀನು ಸಿಕ್ಕರೆ ಆಕೆಯ ಮಕ್ಕಳಿಗೆ ತೊಂದರೆಯಾಗಲಿದೆ. ಆದ ಕಾರಣ ಕಲಬುರಗಿ ದರ್ಗಾ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ನೀಡಬಾರದು. ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಗಣಿಹಾರ ತಾಂಡಾದ ಸಾರ್ವಜನಿಕರು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.            

ಏನಿದು ಪ್ರಕರಣ? : ಗಣಿಹಾರ ತಾಂಡಾದ ಮೃತ ದೇವಿಬಾಯಿ ಅದೇ ತಾಂಡಾದ ಸೋಮಲು(೫೩) ಎಂಬಾತನ ಜೊತೆಗೆ ಸಹಜೀವನ ನಡೆಸುತ್ತಿದ್ದಳು. ಮೊದಲ ಪತಿ ೧೦ ವರ್ಷದ ಹಿಂದೆ ಮೃತಪಟ್ಟಿದ್ದು, ಮಕ್ಕಳಿದ್ದಾರೆ.
                      
ಸುಮಾರು ೨೦೧೫ರಿಂದ ದೇವಿಬಾಯಿ ಹಾಗೂ ಸೋಮಲು ಸಹಜೀವನ ನಡೆಸುತ್ತಿದ್ದರು. ಮೊದಲ ಪತಿಯ ೨ನೇ ಮಗಳ ಮದುವೆ ವಿಚಾರವಾಗಿ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಸುಮಾರು ಏಳೆಂಟು ತಿಂಗಳ ಹಿಂದೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸಂಗೋಳಗಿಯಲ್ಲಿ ಕೆಲಸಕ್ಕಾಗಿ ಹೋಗಿದ್ದರು. ಸಂಗೋಳಿಗೆ ದೇವಿಬಾಯಿ ಹಾಗೂ ಮಗಳು ಹೋಗಿದ್ದಾಗಲೂ ಜಗಳವಾಗಿದೆ.
                     
ಆಗ ಮಗಳು ವಾಪಸ್ ವಿಜಯಪುರಕ್ಕೆ ಹೋಗಿದ್ದಾಳೆ. ದೇವಿಬಾಯಿ ಅಲ್ಲೆ ಉಳಿದುಕೊಂಡಿದ್ದಾಳೆ. ಆಗ ಸೋಮಲು ವಿಜಯಪುರ ಬಸ್ ಹತ್ತಿಸುವುದಾಗಿ ಹೇಳಿ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಬಂದಿದ್ದಾನೆ. ಆಗ ಹಾಮು ಪಪ್ಪು ಜೊತೆಗಿದ್ದ. ಆಳಂದ ಚೆಕ್ ಪೋಸ್ಟ್ ಬಳಿ ಕಾರು ನಿಲ್ಲಿಸಿ ಬಸ್ ಹತ್ತಿಸದೆ ಕಲಬುರಗಿ ದಾಟಿ ಕಾರು ತೆಗೆದುಕೊಂಡು ಹೋದಾಗ ದೇವಿಬಾಯಿಗೆ ಅನುಮಾನ ಬಂದಿದೆ. ಸಣ್ಣೂರು ಕ್ರಾಸ್ ಹತ್ತಿರ ಕಾರಿನಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವ ತೆಗೆದುಕೊಂಡು ಸೇಡಂನತ್ತ ಬರುವಾಗ ಟೋಲ್ ಗೇಟ್ ನೋಡಿ ವಾಪಸ್ ಆಗಿದ್ದಾರೆ.                     

ಶಹಾಬಾದ್ ರಾವೂರ ಮಾರ್ಗವಾಗಿ ಚಿತ್ತಾಪುರಕ್ಕೆ ಬಂದು ಒಂದು ಕ್ಯಾನ್ ಪೆಟ್ರೋಲ್ ಖರೀದಿಸಿದ್ದಾರೆ. ಯಾದಗಿರಿ-ತೆಲಂಗಾಣ ಗಡಿಯಲ್ಲಿ ಶವ ಬಿಸಾಕಲು ನೋಡಿ ವಿಫಲರಾಗಿದ್ದಾರೆ.                             

ನಂತರ ವಾಡಿಯಲ್ಲಿ ಸನಿಕೆ ಖರೀದಿಸಿದ್ದು, ಲಾಡ್ಲಾಪುರ ಹತ್ತಿರ ಶವ ಹೂಳಲು ನೋಡಿದ್ದಾರೆ. ನೆಲ ಗಟ್ಟಿ ಇರುವುದರಿಂದ ಪೆಟ್ರೋಲ್ ಸುರಿದು ಶವ ಸುಟ್ಟು ಪರಾರಿಯಾಗಿದ್ದಾರೆ. ಈ ಸಂಬAಧ ಜೂನ್ ೧, ೨೦೨೫ರಂದು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
                                 
ಊರಿಗೆ ಬಂದು ನಾನು ಅವಳನ್ನು ವಿಜಯಪುರ ಬಸ್ಸಿಗೆ ಹತ್ತಿಸಿದ್ದೇನೆ. ಎಲ್ಲಿ ಹೋದಳು ಗೊತ್ತಿಲ್ಲವೆಂದು ಹೇಳಿದ್ದಾನೆ. ಏನೂ ಗೊತ್ತಿಲ್ಲದಂತೆ ಮನೆಯವರೊಂದಿಗೆ ಹುಬ್ಬಳ್ಳಿ, ನಿಪ್ಪಾಣಿಯಲ್ಲಿ ಹುಡುಕಿದ್ದಾನೆ ಎಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
         
ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ. ಆರೋಪಿಗಳಾದ ಸೋಮಲು ಹಾಗೂ ಹಾಮು ಪಪ್ಪು ಬಂಧಿಸಲಾಗಿದೆ. ಸಧ್ಯ ಕಲಬುರಗಿಯ ದರ್ಗಾ ಜೈಲಿನಲ್ಲಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.