ಭೀಮಶಿ ಅಗಲಿಕೆಯಿಂದ ರೈತಪರ ಧ್ವನಿ ಕ್ಷೀಣ : ಸಚಿವ ಶಿವಾನಂದ ಪಾಟೀಲ

Jul 28, 2025 - 23:25
 0
ಭೀಮಶಿ ಅಗಲಿಕೆಯಿಂದ ರೈತಪರ ಧ್ವನಿ ಕ್ಷೀಣ : ಸಚಿವ ಶಿವಾನಂದ ಪಾಟೀಲ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಚಪ್ಪಲಿ ಹಾಕದೇ ಬದ್ಧತೆಯ  ಹೋರಾಟ ನಡೆಸಿದ್ದ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಅವರಿಲ್ಲದ ವಿಜಯಪುರ ಜಿಲ್ಲೆಯಲ್ಲಿ ರೈತ-ಕಾರ್ಮಿಕ ಧ್ವನಿ ಕ್ಷೀಣಿಸಿದಂತಾಗಿದೆ. ಹೋರಾಟಕ್ಕೆ ಮತ್ತೊಂದು ಹೆಸರೇ ಭೀಮಶಿ ಕಲಾದಗಿ ಎಂಬಂತಾಗಿದ್ದು ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ಸೋಮವಾರ ಇಂಡಿ ತಾಲೂಕಿನ ಹಂಜಗಿ ಗ್ರಾಮದ ತೋಟದ ವಸ್ತಿಯಲ್ಲಿ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಪುಣ್ಯಸ್ಮರಣೆ ಸಂದರ್ಭದಲ್ಲಿ ಭೀಮಶಿ ಅವರ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಅವರು, ನನ್ನೊಂದಿಗೆ ಸುದೀರ್ಘ 35 ವರ್ಷಗಳ ಒಡನಾಡ ಹೊಂದಿದ್ದ ಭೀಮಶಿ ಕಲಾದಗಿ ಅವರು, ಹಲವು ಸಮಸ್ಯೆಗಳ ಪರಿಹಾರದ ವಿಷಯವಾಗಿ ನನ್ನೊಂದಿಗೆ ಚರ್ಚಿಸುತ್ತಿದ್ದರು. ಜಿಲ್ಲೆಯ ಸಮಗ್ರ ನೀರಾವರಿ ವಿಷಯಗಾಗಿ ಅವರು ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆಯುವ ಶಪಥ ಮಾಡಿದ್ದರು. ನೀರಾವರಿ ಯೋಜನೆ ಅನುಷ್ಠಾನದ ಬಳಿಕ ನಾನೇ ಅವರಿಗೆ ಚಪ್ಪಲಿ ಹಾಕುವ ಕುರಿತು ಮಾತನಾಡಿದ್ದೆ ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಷಯವಾಗಿ ಸಮಾಜಮುಖಿ ಹೋರಾಟದಲ್ಲೇ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದ ಭೀಮಶಿ ಅವರು, ಸಮಾಜದ ಕುರಿತು ಹೊಂದಿದ್ದ ಕಾಳಜಿ ಅನುಕರಣೀಯ. ತಮ್ಮ ಹೋರಾಟದ ಹಾದಿಯಲ್ಲಿ ಕುಟುಂಬವನ್ನೂ ಲೆಕ್ಕಿಸದೇ ಹೋದಾಗ ಅವರ ಪತ್ನಿ, ಮಕ್ಕಳು ಸಂಘರ್ಷದ ಮೂಲಕವೇ ಬದುಕು ಕಟ್ಟಿಕೊಂಡ ಬಗೆಯೂ ಬಹುದೊಡ್ಡ ಹೋರಾಟದ ಹಾದಿ ಎಂದು ಬಣ್ಣಿಸಿದರು.
ಭೀಮಶಿ ಅವರು ನಡೆಸಿದ ಪ್ರಜಾ ಸತ್ತಾತ್ಮಕ ಹೋರಾಟಗಳು ಇಂದಿನ ಹೋರಾಟಗಾರರಿಗೆ ಮಾದರಿಯಾಗಿದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ನ್ಯಾಯದ ಪರ ಧ್ವನಿಯಾಗುತ್ತಿದ್ದ ಭೀಮಶಿ ಅವರು, ಎಲ್ಲರೊಂದಿಗೆ ಸೌಹಾರ್ದಯುತ ಬಾಂಧವ್ಯ ಹೊಂದಿದ್ದರು ಎಂದು ಸ್ಮರಿಸಿದರು.
ಭೀಮಶಿ ಅವರು ಅಗಲಿದಾಗ ಸರ್ಕಾರದ ಮೂಲಕ ಅವರಿಗೆ ಗೌರವ ಸಲ್ಲಿಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ನಾನೇ ಮನವಿ ಮಾಡಿದ್ದೆ ಎಂದು ನೆನಪು ಮಾಡಿಕೊಂಡ ಸಚಿವರು, ಭೀಮಸಿ ಅವರು ಕುರಿತು ಹಲವರು ಅಪಪ್ರಚಾರವನ್ನೂ ಮಾಡಿದರೂ, ತಲೆ ಕೆಡಿಸಿಕೊಳ್ಳದ ಅವರು ತಮ್ಮ ಹೋರಾಟ ಮುಂದುವರೆಸಿದ್ದರು. ಭೀಮಶಿ ಅವರ ಕುಟುಂಬಕ್ಕೆ ಸರ್ಕಾರದಿಂದ ಸಾಧ್ಯ ಇರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಚಿವ ಎಂ.ಬಿ.ಪಾಟೀಲ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಸಾಮಾಜಿಕ ಹೋರಾಟಗಳಿಂದ ದುಡಿಯುವ ವರ್ಗದ, ಬಡವರ ಪರವಾಗಿ ಜೀವನ ತೇಯ್ದ ವ್ಯಕ್ತಿ ಭೀಮಶಿ ಕಲಾದಗಿ ಅವರು ವಿಜಯಪುರ ಜಿಲ್ಲೆಗೆ ನೀಡಿದ ಕೊಡುಗೆ ಸ್ಮರಣಾರ್ಹ.
ನಾನು ವಿದ್ಯಾರ್ಥಿ ಮುಖಂಡನಾಗಿದ್ದ ಸಂದರ್ಭದಲ್ಲಿ ನೀಲಗುಂದ ಶ್ರೀಗಳ ನೇತೃತ್ವದಲ್ಲಿ ನಡೆದ  ಮುಳವಾಡ ಏತ ನೀರಾವರಿ ಹೋರಾಟ ಒಂದು ತಿಂಗಳಿಗೂ ಅಧಿಕ ಕಾಲ ಮುಂದುವರೆದಿತ್ತು. ಸದರಿ ಹೋರಾಟ ಜನಾಂದೋಲನದ ಸ್ವರೂಪ ಪಡೆದು, ಆಮರಣ ಉಪವಾಸದ ತೀವ ಸ್ವರೂಪ  ಪಡೆಯುವ ಹಂತಕ್ಕೆ ಹೋಗಿದ್ದರಲ್ಲಿ ಭೀಮಶಿ ಕಲಾದಗಿ ಅವರ ಪಾತ್ರ ಬಹುಮುಖ್ಯವಾಗಿತ್ತು. ಅಂತಿಮವಾಗಿ ಈ ಹೋರಾಟಕ್ಕೆ ಮಣಿದ ಅಂದಿನ ಸರ್ಕಾರ ಹೋರಾಟಕ್ಕೆ ನೀರಾವರಿ ಯೋಜನೆ ಜಾರಿಗೊಂಡಿತ್ತು ಎಂದು ನೆನಪಿಸಿದರು.
ರೈತ ಮುಖಂಡ ಪಂಚಪ್ಪ ಕಲಬುರ್ಗಿ ಮಾತನಾಡಿ, ಭೀಮಶಿ ಕಲಾದಗಿ ಅವರೊಂದಿಗೆ ಸೇರಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದೆ. ಹೋರಾಟಗಾರರು ಸಮಾಜಕ್ಕೆ ಬಹಳಷ್ಟು ಕೊಟ್ಟಿದ್ದಾರೆ. ಆದರೆ, ಕುಟುಂಬಕ್ಕೆ ಏನು ಕೊಟ್ಟಿಲ್ಲ, ಅವರ ವೈಯಕ್ತಿಕ ಜೀವನ ಮೇಣದ ಬತ್ತಿಯಂತೆ ಇತ್ತು.
ಕಾವೇರಿ ಹೋರಾಟದ ನಂತರ ನಡೆದ ರಾಜ್ಯದ ದೊಡ್ಡ ಹೋರಾಟ ಭೀಮಾ ಹೋರಾಟವಾಗಿದೆ ಎಂದು ಸ್ಮರಿಸಿದರು. ಔಜ್ ಬ್ಯಾರೇಜ್ ಗೇಟ್ ಕೀಳಲು ಸಚಿವ ಕಾಶಪ್ಪನವರ ಕರೆ ಮೇರೆಗೆ ಕಿತ್ತು ಒಗೆದೆವು. ಗೇಟ್ ಕೀಳಿಸಿ ಸಚಿವರು ಕಾರಿನಲ್ಲಿ ಹೋದರು. ಆಗ ಕಾರು ತಡೆದು, ವಾಗ್ವಾದ ನಡೆಯಿತು. ನಮ್ಮ ಮೇಲೆ ದೂರು ದಾಖಲಾಯಿತು. 
ಸಿಐಟಿಯು ಮುಖಂಡ ವಿ.ಜಿ.ಕೆ.ನಾಯರ್, ಜೆಡಿಎಸ್ ಮುಖಂಡರಾದ ರಿಯಾಜ್ ಫಾರೂಕಿ,  ಬಿ.ಡಿ.ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ರೈತ ಸಂಘದ ಅಧ್ಯಕ್ಷ ಅಣ್ಣರಾಯ ಈಳೇಗಾರ, ಶ್ರೀಧರ ಕುಲಕರ್ಣಿ, ಜೆಡಿಎಸ್ ಮುಖಂಡ ಭೀಮರಾಯ ಪೂಜಾರಿ, ಅಪ್ಪಸಾಬ್ , ಟಿ.ಯಶವಂತ, ಸುರೇಖಾ ರಜಪೂತ, ನಾಯ್ಕೊಡಿ, ಭಾರತಿ ವಾಲಿ, ಮಧು ಕಲಾದಗಿ, ಸುರೇಶ ಕಲಾದಗಿ, ಗಂಗಾಬಾಯಿ ಭೀಮಶಿ ಕಲಾದಗಿ, ಮಾಳಪ್ಪ ಕಲಾದಗಿ, ಹನಮಂತಪ್ಪ ಕಲಾದಗಿ, ಸತೀಶ ಅಡವಿ, ಹನುಮಂತ ಚಿಂಚಲಿ, ಸೋಮನಾಥ ಕಳ್ಳಿಮನಿ, ಅನಿಲ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.