ಕಾಲೇಜು ಉಪನ್ಯಾಸಕಿ ಮೇಲೆ ಹಲ್ಲೆ ಪ್ರಕರಣ : ತೆಲಂಗಾಣ ಮೂಲದ ಆರೋಪಿ ಬಂಧನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಮುದ್ದೇಬಿಹಾಳ : ಬಾಡಿಗೆ ಕೇಳುವ ನೆಪದಲ್ಲಿ ಬಂದು ಕಾಲೇಜು ಉಪನ್ಯಾಸಕಿ ಮೇಲೆ ಹಲ್ಲೆ ಮಾಡಿದ್ದ ಆಗಂತುಕನ ಪರಿಚಯ ಲಭ್ಯವಾಗಿದ್ದು ತೆಲಂಗಾಣದ ರಾಜ್ಯದ ನಲಗೊಂಡ ಜಿಲ್ಲೆಯ ಅನುಮುಲಾ ಮಂಡಲದ ಹಜಾರಿಗುಡದ ನಿವಾಸಿ ಪೇರುಮಾಳ ಸೈದಯ್ಯ ಧನುಂಜಯ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪಿಎಸ್‌ಐ ಸಂಜಯ ತಿಪರೆಡ್ಡಿ, ಈತ ಮನೆ ಬಾಡಿಗೆ ಕೇಳುವ ನೆಪದಲ್ಲಿ ಉಪನ್ಯಾಸಕಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಳ್ಳತನ ಮಾಡಲು ಹೋಗಿದ್ದನೆಂದು ಆರೋಪಿ ಬಾಯ್ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಒಬ್ಬಂಟಿಯಾಗಿರುವ ಮಹಿಳೆಯರು ತಮ್ಮ ಮಹಡಿಯ ಮನೆಗಳ ಕೊಠಡಿಯಲ್ಲಿ ಪರಿಚಿತರನ್ನೇ ಗುರುತಿಸಿ ಬಾಡಿಗೆ ಕೊಡುವ ಕಾರ್ಯ ಮಾಡಬೇಕು. ಹೆಚ್ಚಿನ ಬಾಡಿಗೆ ಆಸೆಯಿಂದ ಅಪರಿಚಿತರಿಗೆ ಮನೆ ಕೊಡುವುದನ್ನು ಕೈಬಿಡಬೇಕು ಎಂದು ಪಿಎಸ್‌ಐ ತಿಪರೆಡ್ಡಿ ನಾಗರಿಕರಲ್ಲಿ ವಿನಂತಿಸಿದ್ದಾರೆ.
ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ : ಉಪನ್ಯಾಸಕಿ ಸುಮಂಗಲಾ ಅಂಗಡಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಉಪನ್ಯಾಸಕಿಯ ಮನೆಗೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಶನಿವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐ ಸಂಜಯ ತಿಪರೆಡ್ಡಿ ಇದ್ದರು.