ಆಶ್ರಯ ಕಾಲೋನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ : ಶಾಸಕ ಯತ್ನಾಳ

Jun 29, 2025 - 09:33
 0
ಆಶ್ರಯ ಕಾಲೋನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ : ಶಾಸಕ ಯತ್ನಾಳ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ನಗರದ ವಾರ್ಡ್ ನಂ.2ರ ದರ್ಗಾ ಹತ್ತಿರದ ಆಶ್ರಯ ಕಾಲೊನಿಯ ನಿವಾಸಿಗಳಿಗೆ ಆದಷ್ಟು ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಿ, ಅನುಕೂಲ ಮಾಡಿಕೊಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭರವಸೆ ನೀಡಿದರು.

ನಗರದ ಆಶ್ರಯ ಕಾಲೊನಿ ಶಂಕರಲಿಂಗ ಗುಡಿ ರಸ್ತೆಯಲ್ಲಿರುವ ಶ್ರೀ ವಾರಿ ಮಾರುತಿ ದೇವಸ್ಥಾನ ಹತ್ತಿರ ಶನಿವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಿಸಲಾದ ರೂ.10 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಕಾಲೊನಿಯ ಜಾಗವು ಕಂದಾಯ ಇಲಾಖೆ ಒಡೆತನದಲ್ಲಿದ್ದು, ಸ್ಲಂ ಬೋರ್ಡ್ ಗೆ ಹಸ್ತಾಂತರಿಸಿದ ಬಳಿಕ ತಮಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರೊಂದಿಗೆ ಸಭೆ ಕೂಡ ಮಾಡಿರುವುದಾಗಿ ತಿಳಿಸಿದರು.

ಸದರಿ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಈಗಾಗಲೇ ಸ್ವಂತ ಹಣದಲ್ಲಿ ಸಂಗೋಳ್ಳಿ ರಾಯಣ್ಣ ಮೂರ್ತಿ ಅಳವಡಿಸಲಾಗಿದ್ದು, ಅದಕ್ಕೆ ವೃತ್ತ ನಿರ್ಮಿಸಿ ಕೊಡಲಾಗುವುದು ಎಂದ ಅವರು, ವಾರಿ ಮಾರುತಿ ದೇವಸ್ಥಾನಕ್ಕೆ ಹೆಚ್ಚುವರಿಯಾಗಿ ರೂ.15 ಲಕ್ಷ ಅನುದಾನ ಮಂಜೂರಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಸಾರ್ವಜನಿಕರಿಂದ ಶಾಸಕರು ಅಹವಾಲು ಆಲಿಸಿದರು. ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಸಾಯಿಬಣ್ಣ ಬೋವಿ, ರಾಜಶೇಖರ ಭಜಂತ್ರಿ, ರಾಹುಲ್ ಔರಂಗಬಾದ್, ಜಾನಿ ಬಾಟುಂಗೆ, ಬಿ.ಎಸ್.ಶೆಟ್ಟಿ, ಪ್ರಶಾಂತ ಬಡಿಗೇರ, ಸಂತೋಷ ಕಾವಟೆಕರ, ಲೋಕೋಪಯೋಗಿ ಇಲಾಖೆಯ ಜೆ.ಇ ಸುಭಾಸ ಸಜ್ಜನ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.