ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿಎಲ್ಓ ಕರ್ತವ್ಯದಿಂದ ಮುಕ್ತಿ ಮಾಡಿ; ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

Jun 20, 2025 - 00:21
 0
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿಎಲ್ಓ ಕರ್ತವ್ಯದಿಂದ ಮುಕ್ತಿ ಮಾಡಿ; ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ವಿಜಯಪುರ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ ಬಿಎಲ್ಓ (ಮತಗಟ್ಟೆ ಮಟ್ಟದ ಅಧಿಕಾರಿ) ಕಾರ್ಯಕ್ಕೆ ನಿಯುಕ್ತಿಗೊಳಿಸಿದ್ದು, ಬಿಎಲ್ಓ ಕರ್ತವ್ಯದಿಂದ ಮುಕ್ತಿಗೊಳಿಸಿ ಶಿಕ್ಷಕರಿಗೆ ಪಾಠ ಮಾಡಲು ಅವಕಾಶ ಕೊಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಹೇಳಿದರು.

ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಹಾಗೂ ತಹಶಿಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಗುರುವಾರ ಸಂಜೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಮಾತ್ರ ಬಿ.ಎಲ್.ಓ ಕರ್ತವ್ಯ ನಿರ್ವಹಿಸಲು ನಿಯುಕ್ತಿ ಮಾಡಿರುವುದು ವಿಷಾದನೀಯ. ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸರಕಾರಿ ಪ್ರೌಢಶಾಲೆಗಳಿವೆ, ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ, ಗ್ರಾಮ ಪಂಚಾಯತ ಕಛೇರಿಗಳಿವೆ, ಕೈಗಾರಿಕಾ ತರಬೇತಿ ಕೇಂದ್ರಗಳಿವೆ ಮತ್ತು ಪಶು ವೈದ್ಯಕೀಯ ಇಲಾಖೆಯ ನೌಕರರಿದ್ದಾರೆ. ಅಲ್ಲದೆ ಸರಕಾರದಿಂದ ವೇತನ ಪಡೆಯುವ ಇತರೆ ಇಲಾಖೆಯ ನೌಕರರು ಇದ್ದಾರೆ. ಈ ಎಲ್ಲ ಇಲಾಖೆಯ ನೌಕರರನ್ನು ಬಿ.ಎಲ್.ಓ ಎಂದು ಕೆಲಸ ಮಾಡಲು ನೇಮಕ ಮಾಡಬೇಕು. ಕೇವಲ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮಾತ್ರ ಬಿ.ಎಲ್.ಓ ಗಳೆಂದು ನೇಮಕ ಮಾಡುತ್ತೀರುವುದು ಯಾವ ನ್ಯಾಯ? ಈ ತಂತ್ರದ ಹಿಂದೆ ಖಾಸಗಿ ಶಾಲೆಗಳ ಕೈವಾಡ ಮತ್ತು ಕುಮ್ಮಕ್ಕು ಇರುತ್ತದೆ. 

ರಾಜ್ಯದ ಕನ್ನಡ ಪ್ರಾಥಮಿಕ ಶಾಲೆಗಳನ್ನು ಶಾಶ್ವತವಾಗಿ ಬಂದ ಮಾಡುವಲ್ಲಿ ಹಾಗೂ ಕಾನ್ವೆಂಟ್ ಶಾಲೆಗಳನ್ನು ಪ್ರೋತ್ಸಾಹಿಸುವಲ್ಲಿ ಸಹಕಾರಿಯಾಗಲಿದೆ ಎಂಬಂತಾಗಿದೆ. ಇದರಿಂದ ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳ ಕಗ್ಗೋಲೆಯಾಗಲಿದೆ. ಅದಾಗಲೇ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶಾಲಾ ಕೊಣೆಗಳ ಕೊರತೆ ಇದ್ದು ಜಿಲ್ಲೆಯಾದ್ಯಂತ ಸುಮಾರು 1500 ಶಿಕ್ಷಕರ ಹುದ್ದೆಗಳು ಖಾಲಿ ಇರುತ್ತವೆ. ಇಲ್ಲಿ ಅನಿವಾರ್ಯವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಪಾಠ ಭೋಧನೆ ಮಾಡಲಾಗುತ್ತಿದೆ.

ಸರಕಾರಿ ಶಾಲೆಗಳ ಪಾಠ ಭೋದನೆ ಜೊತೆಗೆ ಶಿಕ್ಷಕರು ಇಲಾಖೆಯ ಹತ್ತು ಹಲವು ಕೆಲಸಗಳ ಜೊತೆಗೆ ಅಕ್ಷರ ದಾಸೋಹ, ಮೊಟ್ಟೆ, ಬಾಳೆಹಣ್ಣು, ಸಿಲೆಂಡರ್ ತರುವುದು, ಪೋಷಕಾಂಶಯುಕ್ತ ಹಾಲು ವಿತರಣೆ, ಕಾಯಿಪಲ್ಲೇ ಖರೀದಿ, ಶಾಲೆ ಸ್ವಚತ್ವ, ಜನಗಣತಿ, ದನಗಣತಿ, ಮನೆಗಣತಿ, ಜಾತಿಗಣತಿ, ಶಾಲೆಯ ಆನಲೈನ ದಾಖಲಾತಿ, ಶಿಷ್ಯವೇತನ, ಮಕ್ಕಳ ಆಧಾರ ನೋಂದಣಿ, ದಾಖಲಾತಿ ಆಂದೋಲನ, ಹಾಜರಾತಿ ಆಂದೋಲನ, ಸಮುದಾಯದತ್ತ ಶಾಲೆ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಕಲೋತ್ಸವ ಮುಂತಾದ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗಬೇಕಾಗಿದೆ. ಹೀಗೆ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯದ ತೀವ್ರ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ.

ಇಂತಹ ಪರಿಸ್ಥಿತಿಯಲ್ಲಿ 5-6 ಜನ ಶಿಕ್ಷಕರಿರುವ ಶಾಲೆಯಲ್ಲಿ 3-4 ಜನ ಶಿಕ್ಷಕರನ್ನು ಬಿ.ಎಲ್.ಓ ಕೆಲಸಕ್ಕೆ ನೇಮಿಸಿದ ಉದಾಹರಣೆಗಳಿವೆ. ಹೀಗಾದರೆ ಶಾಲೆಗಳ ಸ್ಥಿತಿ ಏನಾಗಬೇಡ? ಎಂಬುದನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ದಯವಿಟ್ಟು ನಮ್ಮ ಮನವಿಯನ್ನು ಪುರಸ್ಕರಿಸಿ ಆಯಾ ಗ್ರಾಮದಲ್ಲಿ ಬರತಕ್ಕಂತಹ ಎಲ್ಲ ಇಲಾಖೆಯ “ಸಿ” ದರ್ಜೆ ನೌಕರರನ್ನು ಬಿ.ಎಲ್.ಓ ಗಳೆಂದು ನೇಮಕಾತಿ ಮಾಡಬೇಕು. ಆ ಮೂಲಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಣಕ್ಕೆ ಆಗುತ್ತೀರುವ ಕೆಲಸದ ಒತ್ತಡ ಹಾಗೂ ಅನ್ಯಾಯವನ್ನು ಸರಿಪಡಿಸಬೇಕಾಗಿ ಹೇಳಿದರು.

ಈ ಸಂದರ್ಭದಲ್ಲಿ ಹಣಮಂತ ಕೊಣದಿ, ಜಿ.ವಿ.ಮಠ, ಅಶೋಕ ಬೂದಿಹಾಳ, ಎ.ಬಿ.ಧಡಕೆ, ಸಾಬು ಗಗನಮಾಲಿ, ರಾಜು ಬಿಸನಾಳ, ಸಂತೋಷ ಬಗಲಿ, ಪಿ.ಬಿ.ಮಂಕಣಿ, ಅಶೋಕ ಚನಬಸಗೋಳ, ಪ್ರಕಾಶ ಕುಲಂಗೆ ಬಸವರಾಜ ಮೇಡೆಗಾರ, ಬಸವರಾಜ ಹೊಸಮನಿ, ಶ್ರೀಶೈಲ ಬಬಲೇಶ್ವರ, ನಿಂಗರೆಡ್ಡಿ, ಕುರುವಿನಶೆಟ್ಟಿ ಇತರರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.