ಸದ್ದಿಲ್ಲದೆ ಯಶಸ್ವಿ 25 ದಿನ ಪೂರೈಸಿದ ತಾಯವ್ವ

Jun 28, 2025 - 06:18
Jun 28, 2025 - 06:24
 0
ಸದ್ದಿಲ್ಲದೆ ಯಶಸ್ವಿ 25 ದಿನ ಪೂರೈಸಿದ ತಾಯವ್ವ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

•ತಾಯವ್ವ ಮುಖದಲ್ಲಿ ಗೆಲುವಿನ ನಗು

•ಚಿತ್ರರಂಗದ ಗಣ್ಯರ ಜೊತೆ ಯಶಸ್ಸಿನ ಖುಷಿ ಹಂಚಿಕೊಂಡ ‘ತಾಯವ್ವ’ ಬಳಗ

ಬೆಂಗಳೂರು: ಇದೇ 2025ರ ಮೇ ತಿಂಗಳ 30 ರಂದು ಕನ್ನಡದಲ್ಲಿ ತೆರೆಕಂಡ ‘ತಾಯವ್ವ’ ಚಿತ್ರ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ. ‘ಅಮರ ಫಿಲಂಸ್’ ಬ್ಯಾನರಿನಲ್ಲಿ ಗೀತಪ್ರಿಯಾ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ತಾಯವ್ವ’ ಮಹಿಳಾ ಪ್ರದಾನ ಕಥಾಹಂದರವನ್ನು ಹೊಂದಿದ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಗ್ರಾಮೀಣ ಭಾಗದ ಸೂಲಗಿತ್ತಿ ಮಹಿಳೆಯ ಬದುಕನ್ನು ಅನಾವರಣ ಮಾಡಲಾಗಿದೆ. 

ಸದ್ಯ ಬಿಡುಗಡೆಯಾಗಿರುವ ‘ತಾಯವ್ವ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರತಂಡ, ‘ತಾಯವ್ವ’ ಚಿತ್ರದ ಯಶಸ್ವಿ ಪತ್ರಿಕಾಗೋಷ್ಟಿ (ಸಕ್ಸಸ್ ಮೀಟ್) ಆಯೋಜಿಸಿತ್ತು. 

ಈ ಸಮಾರಂಭದಲ್ಲಿ ಹಿರಿಯ ನಟ ಸುರೇಶ್ ಹೆಬ್ಳೀಕರ್, ಸಂಗೀತ ನಿರ್ದೇಶಕ ಕೆ. ಕಲ್ಯಾಣ್, ಲಹರಿ ವೇಲು, ನಿರ್ದೇಶಕರಾದ ಯೋಗರಾಜ್ ಭಟ್, ಹರಿಪ್ರಸಾದ್ ಜಯಣ್ಣ, ನಿರ್ಮಾಪಕ ಸಿಲ್ಕ್ ಮಂಜು, ‘ಕೃಪಾನಿಧಿ ಸಮೂಹ ಶಿಕ್ಷಣ ಸಂಸ್ಥೆ’ಗಳ ಅಧ್ಯಕ್ಷ ಸುರೇಶ್ ನಾಗಪಾಲ್, ನಟ ನಿರಂಜನ್ ಶೆಟ್ಟಿ, ನಟಿ ಸಿಂಧೂ ಲೋಕನಾಥ್ ಸೇರಿದಂತೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಹಾಜರಿದ್ದರು. 

ಇದೇ ವೇಳೆ ಮಾತನಾಡಿದ ‘ತಾಯವ್ವ’ ಚಿತ್ರದ ನಿರ್ಮಾಪಕಿ ಮತ್ತು ನಟಿ ಗೀತಪ್ರಿಯಾ, ‘ಸೂಲಗಿತ್ತಿಯೊಬ್ಬಳ ಬದುಕಿನ ಅನಾವರಣ ‘ತಾಯವ್ವ’ ಸಿನಿಮಾದ ಮೂಲಕ ಮಾಡಿದ್ದೇವೆ. ಸೂಲಗಿತ್ತಿ ನರಸಮ್ಮ ಅವರಂಥ ನಮ್ಮ ಗ್ರಾಮೀಣ ಭಾಗದ ಅನೇಕ ಸೂಲಗಿತ್ತಿ ಮಹಿಳೆಯರನ್ನು ಪ್ರೇರಣೆಯಾಗಿ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇವೆ. ನಮ್ಮ ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರು ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ‘ತಾಯವ್ವ’ ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳಿಸಿ ಎಂಬ ಸಂದೇಶ ಸಿನಿಮಾ ನೋಡಿದ ಪ್ರತಿಯೊಬ್ಬರ ಮನಮುಟ್ಟಿದೆ’ ಎಂದರು. 

‘ನಮ್ಮ ಮೊದಲ ಸಿನಿಮಾಕ್ಕೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ‘ತಾಯವ್ವ’ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಮಾತನಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮುಂದೆಯೂ ಇಂಥದ್ದೇ ಸಾಮಾಜಿಕ ಕಥಾಹಂದರದ ಕಥೆಗಳನ್ನು ಸಿನಿಮಾ ಮಾಡಿ ತೆರೆಮೇಲೆ ತರಲು ಇದು ನಮಗೆ ಪ್ರೋತ್ಸಾಹಿಸಿದಂತಾಗಿದೆ’ ಎಂದರು. 

‘ತಾಯವ್ವ’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಹಾಜರಿದ್ದ ಅನೇಕ ಗಣ್ಯರು ಚಿತ್ರದ ಬಗ್ಗೆ ಮತ್ತು ನಟಿ, ನಿರ್ಮಾಪಕಿ ಗೀತಪ್ರಿಯಾ ಅವರ ಬಗ್ಗೆ ನೆಚ್ಚುಗೆಯ ಮಾತುಗಳನ್ನಾಡಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.