ಐಸಿಎಒ ಜಾಗತಿಕ ಸಭೆ: ಚಿಲಕ ಮಹೇಶ್ ಸಂಶೋಧನಾ ವರದಿಗೆ ಭಾರಿ ಪ್ರಶಂಸೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕಲಬುರಗಿ : ಭಾರತ ಒಳಗೊಂಡAತೆ ಜಗತ್ತಿನ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸುರಕ್ಷಿತ ಹಾಗೂ ಸಮರ್ಪಕ ಕಾರ್ಯಾಚರಣೆಗೆ ಮಹತ್ವ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ಐಸಿಎಒ) ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ಯೋಜನಾ ಉಪಸಮಿತಿಯ ಒಂಬತ್ತನೇ ಜಾಗತಿಕ ಸಭೆ ಇತ್ತೀಚೆಗೆ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ನಡೆಯಿತು.
ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕ ಮಹೇಶ್ ನೇತೃತ್ವದಲ್ಲಿ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಇಬ್ಬರು ಅಧಿಕಾರಿಗಳು (ಡಿಜಿಸಿಎ) ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಐವರು ಅಧಿಕಾರಿಗಳನ್ನು ಒಳಗೊಂಡ ಸಮಿತಿ ಸದಸ್ಯರು ಈ ಅಂತಾರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೋವಿಡ್ ಅವಧಿಯ ನಂತರದ ವಿಮಾನಯಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳ ಮೂಲಸೌಕರ್ಯಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪೂರಕವಾಗಿ ವಿಮಾನ ನಿಲ್ದಾಣಗಳ ಸುಲಲಿತ ಕಾರ್ಯಾಚರಣೆಯಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಹೆಚ್ಚು ಒತ್ತು ನೀಡಬೇಕೆಂಬುದರ ಕುರಿತು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ತಮ್ಮ ಸಂಶೋಧನಾ ವರದಿಗಳನ್ನು ಮಂಡಿಸುವ ಮೂಲಕ ಗಮನ ಸೆಳೆದರು.
ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕ ಮಹೇಶ್ ಅವರು ಮಂಡಿಸಿದ ‘ಡಿಜಿಟಲ್ ಟ್ವಿನ್ (ಅವಳಿ) ತಂತ್ರಜ್ಞಾನ’ ಕುರಿತ ಸಂಶೋಧನಾ ವರದಿ ಸಭೆಯಲ್ಲಿ ಪ್ರಶಂಸೆಗೆ ಪಾತ್ರವಾಯಿತು.
ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಸಂಯೋಜನೆಯಾಗಿ ಕಾರ್ಯನಿರ್ವಹಿಸುವ ಈ ತಂತ್ರಜ್ಞಾನದ ಬಳಕೆಯಿಂದಾಗಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಮೇಲೆ ತೀವ್ರ ನಿಗಾ ವಹಿಸುವಿಕೆ ಸಾಧ್ಯವಾಗಲಿದೆ. ಅದರಲ್ಲೂ ಮುಖ್ಯವಾಗಿ, ಸೈಬರ್ ಸುರಕ್ಷತೆ, ಸಿಬ್ಬಂದಿಯ ತರಬೇತಿಗಾಗಿ ತೊಡಕುರಹಿತ ಸಿಮ್ಯುಲೇಶನ್ ಗಳ ಸಮರ್ಪಕ ಬಳಕೆಯ ಮೇಲೆ ಡಿಜಿಟಲ್ ಟ್ವಿನ್ ತಂತ್ರಜ್ಞಾನ ಬೆಳಕು ಚೆಲ್ಲಲಿದೆ ಎಂದು ಚಿಲಕ ಮಹೇಶ್ ತಮ್ಮ ಉಪನ್ಯಾಸದ ಮೂಲಕ ಪ್ರತಿಪಾದಿಸಿದರು.
ಇದರ ಜೊತೆಗೆ, ಸುಧಾರಿತ, ಸುರಕ್ಷಿತ ಹಾಗೂ ಮುಕ್ತ ಮಾಹಿತಿ ಹಂಚಿಕೆಗೆ ಈ ಅವಳಿ ತಂತ್ರಜ್ಞಾನ ಅನುವು ಮಾಡಿಕೊಡಲಿದ್ದು, ಇದರಿಂದ ಪರಿಣಾಮಕಾರಿ ಮತ್ತು ಸ್ಥಿತಿಸ್ಥಾಪಕ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಸಾಧ್ಯವಾಗಲಿದೆ ಎಂದು ನುಡಿದರು.
ಹಾಗಾಗಿ, ವಿಮಾನ ನಿಲ್ದಾಣಗಳ ಕಾರ್ಯಕ್ಷಮತೆ, ಭದ್ರತೆ, ಸೈಬರ್ ಸುರಕ್ಷತೆ ಮತ್ತು ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಯ ತರಬೇತಿಯಲ್ಲಿ ಡಿಜಿಟಲ್ ಟ್ವಿನ್ ತಂತ್ರಜ್ಞಾನದ ಬಳಕೆಗೆ ಮಾನ್ಯತೆ ನೀಡುವುದರಿಂದ ಪ್ರಯಾಣಿಕರ ಸುರಕ್ಷತೆಯ ಸದುದ್ದೇಶ ಕೈಗೂಡಲಿದೆ ಎಂದರು.
ಏಕಕಾಲದಲ್ಲಿ ವಾಸ್ತವ (ರಿಯಲ್ ಟೈಂ) ಮತ್ತು ಊಹಾತ್ಮಕ ವಾಸ್ತವಿಕತೆಯ (ವರ್ಚುವಲ್ ರಿಯಾಲಿಟಿ) ತಂತ್ರಜ್ಞಾನಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸುವುದರಿಂದ ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಆರ್ಥಿಕ ಹೊರೆ ಸಹ ಕಡಿಮೆಯಾಗಲಿದೆ ಎಂದು ತಮ್ಮ ಸಂಶೋಧನಾ ವರದಿಯ ಲಾಭಗಳ ಕುರಿತು ಮನದಟ್ಟು ಮಾಡಿಸಿದರು. ಸಭೆಯಲ್ಲಿ ಚಿಲಕ ಮಹೇಶ್ ಅವರ ಸಂಶೋಧನಾ ವರದಿಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ನಿಖರ ಮಾಹಿತಿಗೆ ಡಿಜಿಟಲ್ ಟ್ವಿನ್ ಸಹಾಯಕ ವಿಮಾನ ನಿಲ್ದಾಣಗಳಲ್ಲಿ ಡಿಜಿಟಲ್ ಟ್ವಿನ್(ಅವಳಿ) ತಂತ್ರಜ್ಞಾನದ ಸಮರ್ಪಕ ಬಳಕೆಯಿಂದಾಗಿ ನಿಖರವಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ವೃದ್ಧಿಯಾಗಲಿದ್ದು, ವಿಮಾನಗಳ ಆಗಮನ-ನಿರ್ಗಮನದ ಸಮಯ ಪಟ್ಟಿ, ಸಾಮರ್ಥ್ಯ ನಿರ್ವಹಣೆ, ಅಪಾಯದ ಅಂದಾಜು ಗ್ರಹಿಸಲು ಹೆಚ್ಚು ಸಹಾಯವಾಗಲಿದೆ. ಜೊತೆಗೆ, ವಿಮಾನ ನಿಲ್ದಾಣಗಳಲ್ಲಿ ಲಗೇಜ್ ನಿರ್ವಹಣೆ, ನಿಲ್ದಾಣದ ಸುತ್ತಲಿನ ಚಟುವಟಿಕೆಗಳ ಮೇಲೆ ಸದಾ ಕಣ್ಗಾವಲಿನ ಭದ್ರತೆ ಸಾಧ್ಯವಾಗಲಿದೆ ಎಂದು ಚಿಲಕ ಮಹೇಶ್ ನುಡಿದರು.
ವಿಮಾನಗಳ ಚಲನವಲನದ ಜೊತೆಗೆ ನಿಲ್ದಾಣಗಳ ಚಟುವಟಿಕೆಗಳ ಸ್ವಯಂಚಾಲಿತ ದಾಖಲು, ನೈಜ ಸಮಯದಲ್ಲಿ ನಿಲ್ದಾಣದ ವಾಹನಗಳ ಹಾಗೂ ವಿಮಾನಗಳ ಚಲನೆಯ ಮೇಲೆ ಕಣ್ಣಿಡುವುದು, ವಿಳಂಬ ಸಾಧ್ಯತೆಗಳ ಕುರಿತು ಎಚ್ಚರಿಕೆ ನೀಡುವುದು ಹೆಚ್ಚು ಸುಲಭವಾಗುತ್ತದೆ ಎಂದು ವಿವರಿಸಿದರು.