ಕುಂಭಮೇಳ; ಕಟ್ಟುನಿಟ್ಟಿನ ಸುರಕ್ಷತೆಗೆ ಪ್ರಧಾನಿಗಳು ಸೂಚಿಸಿದ್ದಾರೆ : ಕುಮಾರಸ್ವಾಮಿ

ಕನ್ನಡಿಗರು ಸಮಸ್ಯೆಯಲ್ಲಿದ್ದರೆ ದೆಹಲಿಯ ನನ್ನ ಕಚೇರಿಯನ್ನು ಸಂಪರ್ಕಿಸಿ ಎಂದ ಕೇಂದ್ರ ಸಚಿವರು
ಕುಂಭಮೇಳದ ಪುಣ್ಯಸ್ನಾನ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ; ಹೆಚ್ಡಿಕೆ ಕಿಡಿ
ಮೈಸೂರು: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಸರಕಾರಕ್ಕೆ ಪ್ರಧಾನಿಗಳು ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಈ ಘಟನೆ ಎಲ್ಲರಿಗೂ ನೋವು ತಂದಿದೆ. ಇವತ್ತು ನಮ್ಮ ಹಿಂದೂ ಧರ್ಮದಲ್ಲಿ ಶ್ರೇಷ್ಠವಾದ ದಿನ ಎನ್ನುವ ಭಾವನೆ ಎಲ್ಲರಿಗೂ ಇದೆ. ಅದಕ್ಕಾಗಿ ಅಲ್ಲಿ ಪುಣ್ಯಸ್ನಾನ ಮಾಡಿದರೆ ಒಳ್ಳೆಯದು ಎನ್ನುವ ಭಾವನೆ ಜನರಲ್ಲಿದೆ. ಅದಕ್ಕಾಗಿ ದಾಖಲೆ ಪ್ರಮಾಣದಲ್ಲಿ ಜನ ಹೋಗಿದ್ದಾರೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಸರಕಾರ ತೆಗೆದುಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರ ಜತೆ ಮಾತನಾಡಿದ್ದಾರೆ. ದೊಡ್ಡ ಮಟ್ಟದ ಮುಂಜಾಗ್ರತಾ ಕ್ರಮ ವಹಿಸಿ ಎಂದು ಯೋಗಿ ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಕುಂಭಮೇಳದಲ್ಲಿ ಅದ್ಭುತವಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದು ಸಮಸ್ಥೆಗೆ ಕಾರಣವಾಗಿದೆ. ಮೌನಿ ಅಮಾವಾಸ್ಯೆ ದಿನ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಹೀಗಾಗಿ ಪರಿಸ್ಥಿತಿಯನ್ನು ನೋಡಿಕೊಂಡು ಬನ್ನಿ ಎಂದು ಕುಂಭಮೇಳ ಸಮಿತಿ ಜನತೆಗೆ ಮನವಿ ಮಾಡಿತ್ತು. ಆದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿರುವಾಗ ಈ ಘಟನೆ ನಡೆದಿದೆ ಎಂದು ಸಚಿವರು ನೋವು ವ್ಯಕ್ತಪಡಿಸಿದರು.
ಸಮಸ್ಯೆ ಇದ್ದರೆ ನಮ್ಮ ಕಚೇರಿ ಸಂಪರ್ಕಿಸಿ:
ಕುಂಭಮೇಳದಲ್ಲಿ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದು, ಯಾರಿಗೆ ಆದರೂ ಸಮಸ್ಯೆ ಆಗಿದ್ದರೆ ದೆಹಲಿಯಲ್ಲಿರುವ ನನ್ನ ಸಚಿವಾಲಯವನ್ನು ಸಂಪರ್ಕಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ.
ಯಾರಿಗೆ ಸಮಸ್ಯೆ ಆಗಿದ್ದರೂ ನನ್ನ ಸಂಪರ್ಕ ಮಾಡಲು ಹೇಳಿದ್ದೇನೆ. ಮಾಧ್ಯಮದ ಮೂಲಕ ಮತ್ತೆ ಮನವಿ ಮಾಡುತ್ತೇನೆ. ನಮ್ಮ ಅಧಿಕಾರಿಗಳಿಗೂ ಕೂಡ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಾಂಗ್ರೆಸ್ ಸಂಸ್ಕೃತಿಯೇ ಅಂತದ್ದು; ಖರ್ಗೆ ಹೇಳಿಕೆಗೆ ಸಚಿವರ ಕಿಡಿ:
ಕುಂಭಮೇಳದ ಪುಣ್ಯಸ್ನಾನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆ ಬಗ್ಗೆ ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಕಾಂಗ್ರೆಸ್ ನವರ ಸಂಸ್ಕೃತಿಯೇ ಅಂತದ್ದು. ಅವರಿಗೆ ನಮ್ಮ ಆಚಾರ ವಿಚಾರ, ನಂಬಿಕೆಗಳು ಎಂದರೆ ಆಗಿ ಬರುವುದಿಲ್ಲ ಎಂದರು.
ಕಾಂಗ್ರೆಸ್ ನವರಿಗೆ ಟೀಕೆ ಮಾಡುವುದೇ ಕೆಲಸ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಮಾಡಿರುವ ಟೀಕೆ, ಪದ ಬಳಕೆ ಸರಿಯಿಲ್ಲ. ಕಾಂಗ್ರೆಸ್ ಗೆ ನಮ್ಮ ಧಾರ್ಮಿಕ ಆಚರಣೆಗಳ ಮೇಲೆ ನಂಬಿಕೆ ಇಲ್ಲ. ಅದಕ್ಕೆ ಈ ರೀತಿ ಮಾತನಾಡುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಕುಮಾರಸ್ವಾಮಿ ಅವರು ಖಂಡಿಸಿದರು.
ಕಾಂಗ್ರೆಸ್ ನವರು ಬೆಳಗಾವಿಯಲ್ಲಿ ಜೈ ಬಾಪು, ಜೈ ಅಂಬೇಡ್ಕರ್, ಜೈ ಸಂವಿಧಾನ್ ಎಂದು ಕಾರ್ಯಕ್ರಮ ಮಾಡಿದರು. ಗಾಂಧೀಜಿಯವರ ಹೆಸರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿದರು. ಆದರೂ ಈಗ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಗಾಂಧೀಜಿ ಅವರ ಮೇಲೆ ಕಾಂಗ್ರೆಸಿಗರಿಗೆ ನಂಬಿಕೆ ಇದ್ದಿದ್ದರೆ ಇಂತಹ ಮಾತುಗಳು ಬರುತ್ತಿರಲಿಲ್ಲ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಡಾ.ಅನ್ನದಾನಿ, ಮಾಜಿ ಮೇಯರ್ ರವಿಕುಮಾರ್ ಮುಂತಾದವರು ಸಚಿವರ ಜತೆಯಲ್ಲಿ ಇದ್ದರು.