ಯರಿನಾರಾಯಣಪುರ ಗ್ರಾಮದ ಕೆರೆಗೆ ತಡೆಗೋಡೆ ನಿರ್ಮಾಣ : ಸಚಿವ ಸಂತೋಷ ಲಾಡ್

Jun 22, 2025 - 09:32
 0
ಯರಿನಾರಾಯಣಪುರ ಗ್ರಾಮದ ಕೆರೆಗೆ ತಡೆಗೋಡೆ ನಿರ್ಮಾಣ : ಸಚಿವ ಸಂತೋಷ ಲಾಡ್
ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಭೇಟಿ ನೀಡಿದರು. 

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಹುಬ್ಬಳ್ಳಿ : ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿವೆ. ಕೆರೆಗಳು ಕುಡಿಯುವ ನೀರಿನ ಮೂಲಗಳಾಗಿವೆ. ಕೆರೆಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯರಿನಾರಾಯಣಪುರ ಗ್ರಾಮದ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. 

ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿ, ಮೊನ್ನೆ (ಜೂನ್ ೧೯) ದಿನ ಕೆರೆಯಲ್ಲಿ ಮೃತರಾದ ಮಕ್ಕಳ ಮನೆಗೆ ತೆರಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಳೆಗಾಲದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕೆರೆಗಳು ಭರ್ತಿಯಾಗುತ್ತವೆ. ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಕ್ಕಳು ಓಡಾಡದಂತೆ ಮೊದಲೇ ಸಾರ್ವಜನಿಕರು, ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿನ ಕೆರೆಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ಸಹ ಕೊಡಲಾಗಿದೆ. ಜನರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುವುದು. ಜಿಲ್ಲ ಪಂಚಾಯತ, ಜಿಲ್ಲಾಡಳಿತದಿಂದ ಕೆರೆಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. 

ಗುಡೇನಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಯರಿನಾರಾಯಣಪುರ ಗ್ರಾಮದ ಕೆರೆಗೆ ಈಗಾಗಲೇ ರೂ. ೫೦ ಲಕ್ಷ ಅನುದಾನವನ್ನು ನೀಡಲಾಗಿತ್ತು. ಕೆರೆ ಕೂಡ ಬಹಳಷ್ಟು ದೊಡ್ಡದಾಗಿದೆ. ತಡೆಗೋಡೆ ನಿರ್ಮಾಣ ಮಾಡಿದರೂ ಸಹ ಮಕ್ಕಳು ಕೆರೆ ಕಡೆಗೆ ಹೋಗದಂತೆ ಪಾಲಕರು ಎಚ್ಚರ ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಸುಮಾರು ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೆರೆಯ ದಾರಿಯಲ್ಲಿ ಮಕ್ಕಳು ಚಲಿಸದಂತೆ ಎಚ್ಚರ ವಹಿಸಿದ್ದರೂ ಕೂಡ ಮಕ್ಕಳು ಕೆರೆಯ ಕಡೆಗೆ ತೆರಳುತ್ತಿದ್ದಾರೆ. ಇದರಿಂದ ಈ ಅವಘಡ ಸಂಭವಿಸಿದೆ ಎಂದರು. 

ಜಿಲ್ಲಾಡಳಿತದಿಂದ ಕೆರೆಗೆ ತಡೆಗೋಡೆ ನಿರ್ಮಾಣ

ಯರಿನಾರಾಯಣಪುರ ಗ್ರಾಮದ ಕೆರೆಗೆ ಜಿಲ್ಲಾಡಳಿತದಿಂದ ತಡೆಗೋಡೆ ನಿರ್ಮಾಣ ಮಾಡಲಾಗುವುದು. ತಡೆಗೋಡೆ ನಿರ್ಮಾಣ ಮಾಡಿದರೂ ಸಹ ಇಂತಹ ಅವಘಡಗಳನ್ನು ತಡೆಯಲಾಗುವುದಿಲ್ಲ. ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಹಾಗೂ ಶಾಸಕರ ಅನುದಾನದಿಂದ ತಡೆಗೋಡೆ ನಿರ್ಮಾಣ ಮಾಡಬಹುದಾಗಿತ್ತು. ತಡೆಗೋಡೆ ನಿರ್ಮಾಣದಿಂದ ಸಮಸ್ಯೆಗಳು ಪರಿಹರಿಯುವುದಿಲ್ಲ. ಗ್ರಾಮಸ್ಥರು ಸಹ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದರು. 

ಅಂಗನವಾಡಿ ಕೇಂದ್ರ ಸ್ಥಳಾಂತರ

ಯರಿನಾರಾಯಣಪುರ ಗ್ರಾಮದ ಕೆರೆಯ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಮಕ್ಕಳನ್ನು ಕಾಪಾಡುವುದು ಪಾಲಕರು ಮತ್ತು ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಅಂಗನವಾಡಿ ಕೇಂದ್ರಗಳ ಬಗ್ಗೆ ಗಮನ ಹರಿಸುವುದು ಅಗತ್ಯವಿದೆ ಎಂದರು. 

ಕುಟುಂಬಸ್ಥರಿಗೆ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳಲ್ಲಿ ಮನವಿ

ಗುಡೇನಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಯರಿನಾರಾಯಣಪುರ ಗ್ರಾಮದ ಶರೀಫಸಾಬ್ ಚಂದುಖಾನವರ ಅವರ ಮಕ್ಕಳಾದ ಮುಜಮ್ಮಿಲ್ ಹಾಗೂ ಮುಶೀರ್ ಎಂಬ ಮಕ್ಕಳು ಜೂನ್ ೧೯ ರಂದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳನ್ನು ಸ್ವತಃ ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. 

ಸಂತೋಷ ಲಾಡ್ ಫೌಂಡೇಶನ್ ನಿಂದ ಸಹಾಯಧನ ನೆರವು

ಸಂತೋಷ ಲಾಡ್ ಫೌಂಡೇಶನ್ ನಿಂದ ಮೃತರ ಕುಟುಂಬಸ್ಥರಿಗೆ ರೂ.೪ ಲಕ್ಷ ಸಹಾಯಧನವನ್ನು ವಿತರಣೆ ಮಾಡಿದರು. ಕುಟುಂಬಸ್ಥರು ಹೆಚ್ಚಿನ ಧೈರ್ಯ ತಂದುಕೊಳ್ಳಬೇಕು ಎಂದು ಸಾಂತ್ವನ ತಿಳಿಸಿದರು. 

ಇದೇ ಸಂದರ್ಭದಲ್ಲಿ ಸುಂದರವ್ವ ಅಗಸರ ಅವರು ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಹಣ ಕೆಲವು ತಿಂಗಳಿನಿAದ ಬರುತ್ತಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಕೂಡಲೇ ಪಿಂಚಣಿ ಹಣ ಒದಗಿಸುವಂತೆ ಅವರು ಸಚಿವರ ಬಳಿ ಮನವಿ ಮಾಡಿದರು. ಸಚಿವರು ತಹಶಿಲ್ದಾರ ರಾಜು ಮಾವರಕರ ಮತ್ತು ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಎಸ್. ಅವರಿಗೆ ಸೂಕ್ತ ದಾಖಲೆ ಪಡೆದು, ಪಿಂಚಣಿ ಹಣ ಸಂದಾಯವಾಗುವAತೆ ಕ್ರಮ ಕೈಗೊಳ್ಳಲು ಸೂಚಿಸಿದರು. 

ಈ ಸಂದರ್ಭದಲ್ಲಿ ಶಾಸಕರಾದ ಎಂ.ಆರ್.ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ, ಮಾಜಿ ಶಾಸಕರಾದ ಎಂ.ಎಸ್.ಅಕ್ಕಿ, ಕುಸುಮಾವತಿ ಶಿವಳ್ಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ತಹಶೀಲ್ದಾರರಾದ ರಾಜು ಮಾವರಕರ, ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಎಸಿಪಿ ವಿನೋದ ಮುಕ್ತೇದಾರ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಬೆಟದೂರ, ಉಪಾಧ್ಯಕ್ಷೆ ತಾಯವ್ವ ಕೆಂಚಣ್ಣವರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಧರ್ಮಪ್ರಸಾದ ಕಾಲವಾಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.