ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ
The Greater Bangalore Administrative Amendment Bill 2025 has also been passed in the Legislative Council

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು.
ವಿಧಾನಸಭೆಯಲ್ಲಿ ಅಂಗೀಕೃತ ಸ್ವರೂಪದಲ್ಲಿರುವ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ 2025 ಅನ್ನು ಬೆಂಗಳೂರು ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ( DCM D K Shivakumar )ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಈ ವಿಧೇಯಕದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ತಿದ್ದುಪಡಿಯಲ್ಲಿ ಜಿಬಿಎ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸ್ಪಷ್ಟನೆ ನೀಡಲಾಗಿದೆ” ಎಂದು ತಿಳಿಸಿದರು.
ಸದಸ್ಯರಾದ ಗೋವಿಂದರಾಜು, ಟಿ.ಎ ಶರವಣ, ಹೆಚ್.ಎಸ್ ಗೋಪಿನಾಥ್ ಅವರು ಮಾನ್ಯ ಉಪ ಮುಖ್ಯಮಂತ್ರಿಗಳು ಕೋರಿದ ಸ್ಪಷ್ಟನೆಗೆ ಉತ್ತರ ನೀಡಿದ ಸಚಿವರು, “ನಾವು ಅನೇಕ ಬಾರಿ ನೋಡಿರುವಂತೆ ರಾಜ್ಯ ಸರ್ಕಾರ ಒಂದು ಪಕ್ಷ ಅಧಿಕಾರದಲ್ಲಿದ್ದರೆ, ಪಾಲಿಕೆಯಲ್ಲಿ ಮತ್ತೊಂದು ಪಕ್ಷ ಅಧಿಕಾರದಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗದಂತೆ ಹಾಗೂ ರಾಜ್ಯ ಸರ್ಕಾರ ಪಾಲಿಕೆಗಳನ್ನು ನಿಯಂತ್ರಿಸುವಂತಾಗದಂತೆ ಎಚ್ಚರಿಕೆ ವಹಿಸಲು ಈ ತಿದ್ದುಪಡಿ ತರಲಾಗಿದೆ” ಎಂದರು.
“ಕೆಲವು ಶಾಸಕರು ಜನಸಂಖ್ಯೆ ಹಾಗೂ ವಾರ್ಡ್ ರಚನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗ ನಾವು ಬಳಸಿರುವುದು 2011ರ ಜನಗಣತಿ. ಆಗ ಒಂದು ವಾರ್ಡ್ ನಲ್ಲಿ 18 ಸಾವಿರ ಜನಸಂಖ್ಯೆ ಇದ್ದರೆ ಈಗಿನ ಪರಿಸ್ಥಿತಿಯಲ್ಲಿ 30 ಸಾವಿರದಷ್ಟು ಇರಲಿದೆ. ಮುಂದೆ ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡಿಸುವ ಸಂದರ್ಭದಲ್ಲಿ ನಿಮ್ಮ ಪಕ್ಷದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಈ ವಿಚಾರವನ್ನು ಬೇರೆ ರೂಪದಲ್ಲಿ ಚರ್ಚೆಗೆ ಪ್ರಸ್ತಾವನೆ ನೀಡಿ, ಆಗ ಈ ವಿಚಾರವಾಗಿ ನಿಮಗಿರುವ ಅನುಮಾನಗಳಿಗೆ ಸಂಪೂರ್ಣವಾಗಿ ವಿವರಣೆ ನೀಡುತ್ತೇನೆ. ಈಗ ಈ ವಿಧೇಯಕ ಅಂಗೀಕಾರ ಮಾಡಿಕೊಡಿ” ಎಂದು ತಿಳಿಸಿದರು.
ನಂತರ ಸದನದಲ್ಲಿ ಅಲ್ಪ ಚರ್ಚೆಯ ಬಳಿಕ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, 2025ಕ್ಕೆ ಮಾನ್ಯ ಸಭಾಪತಿಗಳಿಂದ ಅಂಗೀಕಾರ ದೊರೆಯಿತು.