ಪರೀಕ್ಷೆಗಳ ನಿಗದಿ ಅವಾಂತರ, ಖಾಲಿ ಹುದ್ದೆಗಳ ಭರ್ತಿ, ಪರೀಕ್ಷೆ ಮುಂದೂಡಿಕೆ ಬಗ್ಗೆ ಸರ್ಕಾರದ ಗಮನಸೆಳೆದ ಶಾಸಕ ಯತ್ನಾಳ
MLA Basanagouda Patil Yatnal draws the government's attention to the problems with the scheduling of exams, filling of vacancies, and postponement of exams

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡುವಾಗ ಆಗುತ್ತಿರುವ ಅವಾಂತರಗಳು, ನೇಮಕಾತಿ ವಿಳಂಬ, ಅತಿಥಿ ಉಪನ್ಯಾಸಕರ ನೇಮಕಾತಿ ಸಮಸ್ಯೆಗಳು, ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಕುರಿತಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಬುಧವಾರ ತಡರಾತ್ರಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದು, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿದರು.
ಕ್ರೀಡಾ ಕೋಟಾ ಸಮಸ್ಯೆಯಿಂದ ಪರೀಕ್ಷೆಗೆ ತರಲಾಗಿದ್ದ ತಡಯಾಜ್ಞೆ ತೆರವಾಗಿದ್ದರಿಂದ, ಏಕಾಏಕಿ ಹೈದ್ರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ದಿನಾಂಕ ನಿಗದಿಗೊಳಿಸಿದ್ದರಿಂದ, ಬೇರೆ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ತೊಂದರೆ ಆಗಲಿದ್ದು, ಈ ಸಮಸ್ಯೆ ತಪ್ಪಿಸಲು ತಕ್ಷಣ ಸದರಿ ಪರೀಕ್ಷೆ ಮುಂದೂಡಬೇಕು.
ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಆಕಾಂಕ್ಷಿಗಳು ಈಗಾಗಲೇ ಕಷ್ಟ ಪಟ್ಟು ತಯಾರಿ ನಡೆಸಿದ್ದಾರೆ. ಕರೋನ ಕಾರಣಕ್ಕಾಗಿ ನೇಮಕಾತಿ ಮುಂದೂಡಲ್ಪಟ್ಟಿದ್ದರಿಂದ ಪೊಲೀಸ್ ಇಲಾಖೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ, ಪರೀಕ್ಷಾರ್ಥಿಗಳಿಗೆ ವಯೋಮಿತಿ ಸಡಿಲಿಕೆ ಮಾಡಬೇಕು.
ರಾಜ್ಯದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ತುಂಬಾ ತೊಂದರೆ ಆಗುತ್ತಿದೆ. ಹೀಗಾಗಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಸಾವಿರಾರು ಕುಟುಂಬಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲಗೊಳ್ಳಬಹುದು. ವಿಶೇಷವಾಗಿ ನಮ್ಮ ಉತ್ತರ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ ಹಾಗೂ ಮಾನವ ಸಂಪನ್ಮೂಲದ ಲಭ್ಯತೆಯಿಂದ ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಸೇವೆ ಕೊಡಬಹುದಾಗಿದೆ.
ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಬೇಕು. ದೇಶ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯಲ್ಲಿ ನೇಮಕವಾಗಿರುವ ಮಾಜಿ ಸೈನಿಕರು ನಿವೃತ್ತಿ ಸಂದರ್ಭದಲ್ಲಿ ಸ್ವಂತ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪಿ.ಎಸ್.ಐ ಸೇರಿದಂತೆ ಎಲ್ಲ ಹುದ್ದೆಗಳ ನೇಮಕಾತಿ ಆದೇಶ ನೀಡಿ, ಸೇವೆಗೆ ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಪರೀಕ್ಷೆ ನಿಗದಿ ಅವಾಂತರ ತಪ್ಪಿಸಲು ಎಲ್ಲ ಪರೀಕ್ಷಾ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಿಖಿತ ಉತ್ತರ ನೀಡಿದರೆ, ನೇಮಕಾತಿ ವಯೋಮಿತಿ ಸಡಿಲಿಕೆ ಕುರಿತು ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮ ವಹಿಸುವುದಾಗಿ ಗೃಹ ಸಚಿವ ಡಾ.ಪರಮೇಶ್ವರ ಅವರು ಭರವಸೆ ನೀಡಿದರು.