ಪವಿತ್ರ ಜೀವನ ಸುಖ ಸಂಸಾರಕ್ಕೆ ಆಧಾರ : ಯಮುನಾ ಅಕ್ಕನವರು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಇಂಡಿ : ಮನುಷ್ಯನು ಆತ್ಮ ಸಾಕ್ಷಾತ್ಕಾರಕ್ಕಾಗಿ ಹುಟ್ಟಿದ್ದಾನೆ. ಧಾರ್ಮಿಕ ಜೀವನ ನಡೆಸುವುದಕ್ಕಾಗಿ ಹುಟ್ಟಿದ್ದಾನೆ. ಆದರೆ ತನ್ನ ಸುತ್ತಮುತ್ತಲಿನ ಪರಿಸರದ ಪ್ರಲೋಭದಿಂದ , ಸಮಾಜದಿಂದ ದಾರಿ ತಪ್ಪುತ್ತಿದ್ದಾನೆ. ಮನುಷ್ಯನಾಗಿ ಹುಟ್ಟಿ ಬಂದ ಜೀವನದಲ್ಲಿ ಪವಿತ್ರ ಜೀವನವನ್ನು ನಡೆಸಬೇಕು. ಪವಿತ್ರ ಜೀವನ ಸುಖ ಸಂಸಾರಕ್ಕೆ ಆಧಾರವಾಗಿರುತ್ತದೆ ಎಂದು ಯಮುನಾ ಅಕ್ಕನವರು ಹೇಳಿದರು.
ಅವರು ಪಟ್ಟಣದ ಓಂ ಶಾಂತಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ “ಪವಿತ್ರ ಜೀವನವೇ ಸುಖ ಸಂಸಾರಕ್ಕೆ ಆಧಾರ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗವಂತನ ಸ್ಮರಣೆ ಮಾಡುತ್ತ, ಬೇರೆಯವರ ಕಷ್ಟದಲ್ಲಿ ಆದಷ್ಟು ಭಾಗಿಯಾಗಿ ಒಳಿತು ಮಾಡುವ ಮೂಲಕ ಪುಣ್ಯ ಸಂಪಾದನೆ ಮಾಡಬೇಕು. ಯಾರಿಗೂ ಕೆಡುಕಾಗದಂತೆ ಅತೀ ಆಸೆ, ವ್ಯಾಮೋಹಕ್ಕೆ ಬಲಿಯಾಗದೆ ಇದ್ದದ್ದರಲ್ಲಿಯೇ ಸತಿ-ಪತಿಗಳೀರ್ವರೂ ಕೂಡಿಕೊಂಡು ಉತ್ತಮ ಸಂಸಾರ ನಡೆಸಬೇಕು ಎಂದರು.
ಶ್ರೀದೇವಿ ಅಕ್ಕನವರು, ಪ್ರಭು ಕಡಿ, ನೀಲಮ್ಮ ಹಿರೇಮಠ ಮಾತನಾಡಿದರು.
ಜಯಶ್ರೀ ಕಾಯಿ, ಲಲಿತಾ ಯಳಮೇಲಿ, ಕಮಲಾ ಡೊಳ್ಳಿ, ರಾಜಶ್ರೀ ಜೋಳದ, ಶಂತ್ರೆಪ್ಪ ಯಳಮೇಲಿ, ವಿದ್ಯಾಶ್ರೀ ಪಾಟೀಲ, ಉಮಾ ಪಟ್ಟದಕಲ್ ಮತ್ತಿತರರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಸುಖೀ ಸಂಸಾರ ನಡೆಸಿದ ಆದರ್ಶ ಜೋಡಿಗಳಾದ ಶಿವಲಿಂಗಪ್ಪ ಪಟ್ಟದಕಲ್ ಹಾಗೂ ಬಸವರಾಜ ಪಾಟೀಲ ಕುಟುಂಬಸ್ಥರನ್ನು ಸತ್ಕರಿಸಿ ಗೌರವಿಸಲಾಯಿತು.