ವಿಶ್ವದಲ್ಲಿ ಶಾಂತಿ ನೆಲೆಸಲು ಇಂಚಗೇರಿ ಮಠದ ತತ್ವ ಸಿದ್ದಾಂತಗಳು ಅತ್ಯಗತ್ಯ ; ಸಚಿವ ದಿನೇಶ್ ಗುಂಡೂರಾವ್

ರಾಜಧಾನಿಯಲ್ಲಿ ಸ್ವಾತಂತ್ರ್ಯ ಸೇನಾನಿ ಮಾಧವಾನಂದ ಪ್ರಭುಜೀಗಳ ಪುಣ್ಯಸ್ಮರಣೆ ಹಾಗೂ ಕ್ರಾಂತಿಯೋಗಿ ಮಹಾದೇವರ ಶಿಷ್ಯ ಪಂಪಕವಿ ರಾಯಪ್ಪ ಬೆಳಗಲಿಯವರ ಪುಣ್ಯಾರಾಧನೆ ಸಪ್ತಾಹ.

Jun 22, 2025 - 17:51
Jun 22, 2025 - 17:57
 0
ವಿಶ್ವದಲ್ಲಿ ಶಾಂತಿ ನೆಲೆಸಲು ಇಂಚಗೇರಿ ಮಠದ ತತ್ವ ಸಿದ್ದಾಂತಗಳು ಅತ್ಯಗತ್ಯ ; ಸಚಿವ ದಿನೇಶ್ ಗುಂಡೂರಾವ್
ಸ್ವಾತಂತ್ರ್ಯ ಸೇನಾನಿ ಮಾಧವಾನಂದ ಪ್ರಭುಜೀಗಳ ಪುಣ್ಯಸ್ಮರಣೆ ಹಾಗೂ ಕ್ರಾಂತಿಯೋಗಿ ಮಾಧವಾನಂದ ಪ್ರಭುಜಿಗಳ ಪರಮ ಶಿಷ್ಯ ಪಂಪಕವಿ ರಾಯಪ್ಪ ಬೆಳಗಲಿ ಅವರ 11ನೇ ಪುಣ್ಯಾರಾಧನೆ ಸಪ್ತಾಹ  ರವಿವಾರ ಬೆಂಗಳೂರು ಮಹಾನಗರದ ಬಂಜಾರ ಭವನದಲ್ಲಿ ಇಂಚಗೇರಿ ಪೀಠಾಧಿಪತಿ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು, ಆರೋಗ್ಯ ಸಚಿವ ದಿನೇಶ ಗುಂಡುರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರು : ರಾಜ್ಯದಲ್ಲಿ ವಿಶೇಷ ಜಾತ್ಯಾತೀಯ ತತ್ವಸಿದ್ದಾಂತಗಳಿಂದ ಜನಜನಿತವಾಗಿರುವ ಶ್ರೀಕ್ಷೇತ್ರ ಇಂಚಗೇರಿ ಸಾಂಪ್ರದಾಯದ ಸ್ವಾತಂತ್ರ್ಯ ಸೇನಾನಿ ಮಾಧವಾನಂದ ಪ್ರಭುಜೀಗಳ ಪುಣ್ಯಸ್ಮರಣೆ ಹಾಗೂ ಕ್ರಾಂತಿಯೋಗಿ ಮಾಧವಾನಂದ ಪ್ರಭುಜಿಗಳ ಪರಮ ಶಿಷ್ಯ ಪಂಪಕವಿ ರಾಯಪ್ಪ ಬೆಳಗಲಿ ಅವರ 11ನೇ ಪುಣ್ಯಾರಾಧನೆ ಸಪ್ತಾಹ  ರವಿವಾರ ಬೆಂಗಳೂರು ಮಹಾನಗರದ ಬಂಜಾರ ಭವನದಲ್ಲಿ ನಡೆಯಿತು. 

ಪುಣ್ಯಸ್ಮರಣೆ ಸಪ್ತಾಹವನ್ನು ಇಂಚಗೇರಿ ಪೀಠಾಧಿಪತಿ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು, ಆರೋಗ್ಯ ಸಚಿವ ದಿನೇಶ ಗುಂಡುರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಭಾವೈಕ್ಯತೆಯ ತಾಣ ಶ್ರೀಕ್ಷೇತ್ರ ಇಂಚಗೇರಿ ಮಠದ ತತ್ವಸಿದ್ದಾಂತಗಳನ್ನ ಕೊಂಡಾಡಿದರು. 

ಧಾರ್ಮಿಕ, ಆಧ್ಯಾತ್ಮಿಕವಾಗಿ ಮೇರುಘಟ್ಟದಲ್ಲಿರುವ ಇಂಚಗೇರಿ ಮಠ ಇತರೆ ಮಠಗಳಲ್ಲಿ ವಿಭಿನ್ನವಾಗಿದೆ‌. ಎಲ್ಲರನ್ನೂ ಪ್ರೀತಿಸುವ, ರಕ್ಷಿಸುವ, ಎಲ್ಲ ಸಮಾಜದವರನ್ನ ಅಪ್ಪಿ ಭರಮಾಡಿಕೊಳ್ಳುವ ಮಠವಿದ್ದರೇ ಅದು ಇಂಚಗೇರಿ ಮಠ. ಇಂತಹ ಜಾತ್ಯಾತೀತ ತತ್ವದ ಅಡಿಯಲ್ಲಿ ಸ್ಥಾಪನೆಯಾಗಿರೋ ಇಂಚಗೇರಿ ಮಠಕ್ಕೆ ಕ್ರಾಂತಿಕಾರಿ ಇತಿಹಾಸವು ಇದೆ. ಸ್ವಾತಂತ್ರ್ಯ ಹೋರಾಟ, ಗೋವಾ ವಿಮೋಚನಾ ಚಳುವಳಿ, ಕರ್ನಾಟಕ ಏಕೀಕರಣದಲ್ಲಿ ವಿಶೇಷ ಪಾತ್ರವನ್ನವಹಿಸಿದೆ. ಎಲ್ಲರೂ ಒಂದೇ, ಎಲ್ಲರೂ ಚೆನ್ನಾಗಿರಬೇಕು ಎಂದು ಆಶಿಸುವ ಮಠ, ತತ್ವ ಸಿದ್ದಾಂತ ಬೇರೆ ಇದ್ದರು ಎಲ್ಲರನ್ನೂ ಒಂದಾಗಿಸುವ ಮಠ ಯಾವುದಾರೂ ಇದ್ದರೆ ಅದು ಇಂಚಗೇರಿ ಮಠ ಎಂದರು. 

ಮುಂದುವರೆದು ಮಾತನಾಡಿದ ಸಚಿವರು ಜಾತ್ಯಾತೀತ ಎಂದು ಬಾಯಿಂದ ಹೇಳಿದರೆ ಸಾಲದು, ಅದನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಹೀಗೆ ಜಾತ್ಯಾತೀತ ತತ್ವಗಳನ್ನ ಜೀವಾಳವಾಗಿಸಿಕೊಂಡ ಮಠ ಇಂಚಗೇರಿ ಮಠವಾಗಿದೆ ಎಂದರು. 

ಮಾನವೀಯ ಮೌಲ್ಯಗಳ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಇಂಚಗೇರಿ ಮಠದ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಸಧ್ಯದ ದಿನಮಾನಗಳಲ್ಲಿ ವಿಶ್ವಕ್ಕೆ ಮಠದ ಸಿದ್ದಾಂತ ಬೇಕಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಎಲ್ಲರೂ ಇಂಚಗೇರಿ ಮಠದ ಸಿದ್ದಾಂತಗಳನ್ನ ಅನುಸರಿಸಬೇಕಿದೆ ಎಂದರು. 

ಆಧ್ಯಾತ್ಮಿಕ ಸಾಧನೆಗೆ ಗುರುವಿನ ಮಾರ್ಗದರ್ಶನ ಬೇಕು ; ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು

ಮಠದ ಭಕ್ತರನ್ನ ಉದ್ದೇಶಿಸಿ ಆಶೀರ್ವಚನ ನೀಡಿದ ಇಂಚಗೇರಿ ಮಠದ ಪೀಠಾಧಿಪತಿ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಶ್ರೀಗಳು ಶ್ರೀಮಠದ ಮಾಧವಾನಂದ ಪ್ರಭುಜಿಗಳು ಬಸವಣ್ಣವರ ತತ್ವಸಿದ್ದಾಂತಗಳಲ್ಲಿ ನಡೆದವರು‌. ಮಾಧವಾನಂದ ಪ್ರಭುಜಿಗಳು ಸಾವಿರಾರೂ ಅಂತರ್ ಜಾತಿಯ ವಿವಾಹ ಮಾಡಿಸಿದ್ದರು. ಇಂಚಗೇರಿ ಮಠದ ಆಧ್ಯಾತ್ಮಿಕ ಸೌಂದರ್ಯ ತಿಳಿಯಬೇಕಿದ್ದಲ್ಲಿ ಇಂಚಗೇರಿ ಮಠಕ್ಕೆ ಭೇಟಿ ನೀಡಬೇಕು. ಕೆಲವೆಡೆ ಜಾತಿ ಬೇಧ, ಪಂಕ್ತಿಬೇಧಗಳಿವೆ. ಇಂಚಗೇರಿ ಮಠದಲ್ಲಿ ಯಾವುದೇ ಜಾತಿ ಬೇಧವಿಲ್ಲದಂತೆ ನಿತ್ಯದ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಎಲ್ಲ ಜಾತಿ ಸಮುದಾಯದ ಲಕ್ಷಾಂತರ ಜನರು ಏಕಕಾಲಕ್ಕೆ ಸಾಮೂಹಿಕ ಭೋಜನ ಮಾಡುತ್ತಾರೆ‌. ಅಷ್ಟೇ ಸ್ವಾತಂತ್ರ್ಯ ಹೋರಾಟದಲ್ಲಿ ಮಾಧವಾನಂದ ಪ್ರಭುಜಿಗಳ ಕೊಡುಗೆ ಇದೆ. ಅವರ ಆಧ್ಯಾತ್ಮಿಕ ಗುರುಗಳಾದ ಗಿರಿಮಲ್ಲೇಶ್ವರ ಶ್ರೀಗಳ ಆದೇಶದಂತೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಮುಂದೆ ಬರುವ ಸ್ವಾತಂತ್ರ್ಯ ಹೋರಾಟದಲ್ಲಿ ಆಧ್ಯಾತ್ಮದ ಶಕ್ತಿಯನ್ನ ಪ್ರಯೋಗಿಸಲು ಹೇಳಿದ್ದರು. ಅದರಂತೆ ಬ್ರಿಟಿಷರ ವಿರುದ್ಧ ಹೋರಾಟ ತೊಡಗಿದ್ದ ವೇಳೆ ಅವಶ್ಯಕತೆ ಇದ್ದಾಗಲೆಲ್ಲ ಪವಾಡಗಳ ಮೂಲಕ ಬ್ರಿಟಿಷರನ್ನ ಮಾಧವಾನಂದ ಪ್ರಭುಜಿಗಳು ದಂಗು ಬಡಿಸಿದ್ದರು ಎಂದರು. 

ಆಧ್ಯಾತ್ಮಿಕ ಕಾರ್ಯಕ್ರಮ ಮಾಡುವುದು ಮನಸ್ಸಿನ ಶಾಂತಿಗಾಗಿ. ನೂರಾರು ಏಕರೆ ಜಮೀನು ಸಂಪಾದಿಸಿದರು ಶಾಂತಿ ಅನ್ನೋದು ಸಿಗದು. ಶಾಂತಿ, ನೆಮ್ಮದಿಗಾಗಿ ಆಧ್ಯಾತ್ಮ ಬೇಕು ಎಂದರು. 

ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನ ಸರ್ಕಾರವೇ ಮಾಡಬೇಕು. ಪ್ರಾಪಂಚಿಕ ಜೀವನದಿಂದ ಮುಕ್ತಿ ಹೊಂದಲು ಗುರುವಿನ ಗುಲಾಮನಾಗಲೇ ಬೇಕು ಎಂದರು.  

 ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭೂಕೈಲಾಸ ಮಂದಿರದ ಮಹಾದೇವ ಮಹಾರಾಜರು, ಗುರುದೇವಾಶ್ರಮದ ಗುರುಪಾದ ಶರಣರು, ರಾಮತೀರ್ಥ ಕ್ಷೇತ್ರದ ತಾರಾಚಂದ ಮಹಾರಾಜರು, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಇಂಡಿ ಶಾಸಕ ಯಶವಂತರಾಯಗೌಡ ವಿ ಪಾಟೀಲ, ಕರ್ನಾಟಕ ಪ್ರದೇಶ ಸಮಿತಿ ಸಹಕಾರ ಘಟಕದ ಧನರಾಜ್, ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಹರೀಶ್ ಕುಮಾರ್, ರಾಜಶೇಖರ್ ಎಸ್, ಬಾಗಲಕೋಟ ಜಿ.ಪಂ ಉಪಾಧ್ಯಕ್ಷ ಸುಶೀಲಕುಮಾರ್ ಬೆಳಗಲಿ, ಶಂಕರಪ್ಪ ಕೌಜಲಗಿ ಮಹಾರಾಜರು, ಪುಣ್ಯಸ್ಮರಣೆ ಸಮಿತಿ ಅಧ್ಯಕ್ಷ ಆರ್ ಮಹಾದೇವ, ಹೈಕೋರ್ಟ್ ವಕೀಲ ಮುಕುಂದ ಬೆಳಗಲಿ,‌ ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ, ಏಷ್ಯಾನೆಟ್ ಸುವರ್ಣನ್ಯೂಸ್ ವಿಜಯಪುರ ಜಿಲ್ಲಾ ವರದಿಗಾರ ಷಡಕ್ಷರಿ ಕಂಪೂನವರ, ಸಮಾಜ ಸೇವಕ ಧರ್ಮರಾಜ್ ನಾಯಕ,  ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.