ಪರ್ಯಾಯ ಬೆಳೆಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್

Jul 1, 2025 - 23:09
 0
ಪರ್ಯಾಯ ಬೆಳೆಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್
ವಿಜಯಪುರ : ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಜುಲೈ ೧೫ರವರೆಗೆ ತೊಗರಿ ಬಿತ್ತನೆಗೆ ಕಾಲಾವಕಾಶವಿದೆ.  ಒಂದು ವೇಳೆ ಮಳೆ ಬಾರದೆ ಇದ್ದ ಸಂದರ್ಭದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವ ಕುರಿತು ರೈತರಲ್ಲಿ ಸೂಕ್ತ ಜಾಗೃತಿ ತಿಳುವಳಿಕೆ ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ ಕುಮಾರ ಘೋಷ್ ಅವರು ಸೂಚಿಸಿದರು. 
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜನವರಿಯಿಂದ ಜೂನ್‌ವರೆಗೆ ಜಿಲ್ಲೆಯಲ್ಲಿ ಶೇ.೮೨% ರಷ್ಟು ಮಳೆಯಾಗಿದೆ.  ಈ ವರ್ಷ ಏಪ್ರಿಲ್-ಮೇನಲ್ಲಿ ಶೇ.೨೮೩ ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಜುಲೈ ೧೫ರವರೆಗೆ ತೊಗರಿ ಬಿತ್ತನೆಗೆ ಅವಕಾಶವಿದೆ. ಈ ಸಲ ಶೇಕಡ ನೂರರಷ್ಟು ಇಳುವರಿ ಅಂದಾಜಿಸಲಾಗಿದೆ. ಎಲ್ಲ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಮರ್ಪಕವಾಗಿ ದಾಸ್ತಾನಿಟ್ಟುಕೊಂಡು ರೈತರಿಗೆ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಮಳೆ ಬಾರದೇ ಇದ್ದ ಸಂದರ್ಭದಲ್ಲಿ ಪಯಾರ್ಯವಾಗಿ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಕುರಿತು ರೈತರಲ್ಲಿ ವಿವಿಧ ಸಮೂಹ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು. ಹವಾಮಾನಕ್ಕನುಗುಣವಾಗಿ ರೈತರು ಯಾವ ಬೆಳೆಗೆ ಯಾವ ಬೀಜಗಳನ್ನು ಬಳಸಿದ್ದಲ್ಲಿ ಅನುಕೂಲವಾಗುವ ಕುರಿತು ವಿಜ್ಞಾನಿಗಳನ್ನೊಳಗೊಂಡು ರೈತರೊಂದಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವಂತೆ  ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 
ಜಿಲ್ಲೆಯಲ್ಲಿರುವ ರೈತ ಸಂಪರ್ಕ ಕೇಂದ್ರಗಳು ಸಮರ್ಪಕವಾಗಿ ನಿರ್ವಹಣೆಯಾಗಬೇಕು. ಜಿಲ್ಲೆಯಲ್ಲಿ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು.  ಯಾವುದೇ ರೈತರಿಗೆ ಬೀಜ-ರಸಗೊಬ್ಬರ ವಿತರಣೆಯಲ್ಲಿ ತೊಂದರೆಯಾಗದAತೆ ನೋಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ  ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಮಲೀನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗಾಗ ಸ್ವಚ್ಛತೆಗೊಳಿಸುವುದು,  ಫಾಗಿಂಗ್ ಸೇರಿದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು.  ಕಲುಷಿತ ನೀರು ಪೂರೈಕೆಯಾಗದಂತೆ ಜಾಗೃತಿ ವಹಿಸಬೇಕು. ನೀರು ಪರಿಕ್ಷಿಸಿದ ನಂತರವೇ ಸರಬರಾಜುವಿಗೆ ಕ್ರಮ ವಹಿಸಬೇಕು.  ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. 
ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಿಗೆ, ಸಂಬAಧಿಸಿದ ಅಧಿಕಾರಿಗಳು ಕಾಲ-ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸ್ವಚ್ಛತೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಬೇಕು. ಸಣ್ಣ ಪುಟ್ಟ ಯಾವುದೇ ದುರಸ್ತಿ ಕಾರ್ಯಗಳಿದ್ದಲ್ಲಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು. 
ಜಿಲ್ಲೆಯಲ್ಲಿ ಸಿಡಿಲು ಬಡಿದು, ಪತ್ರಾಸ ಬಿದ್ದು ಸೇರಿದಂತೆ ಮಳೆಯಿಂದಾಗಿ ೯ ಜನ ಸಾವನ್ನಪ್ಪಿದ್ದು, ೪೪ ಲಕ್ಷ ರೂ.ಗಳನ್ನು ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೬೫ ಜಾನುವಾರುಗಳು ಸಾವನ್ನಪ್ಪಿದ್ದು, ಸಣ್ಣ ಜಾನುವಾರುಗಳಿಗೆ ೪ ಸಾವಿರ ರೂ. ಹಾಗೂ ದೊಡ್ಡ ಜಾನುವಾರುಗಳಿಗೆ ೩೭ ಸಾವಿರ ರೂ.ದಂತೆ ೯.೪೨ ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಪೂರ್ಣ ಮನೆಗಳು ಹಾನಿಯಾಗಿರುವುದಿಲ್ಲ. ಭಾಗಶ  ೬೧ ಮನೆಗಳಿಗೆ ಹಾನಿಯಾಗಿದ್ದು, ಪಕ್ಕಾ ಮನೆಗಳಿಗೆ ೬೫೦೦ ರೂ. ಹಾಗೂ ಕಚ್ಚಾ ಮನೆಗಳಿಗೆ ೪ ಸಾವಿರ ರೂ.ದಂತೆ ಪರಿಹಾರ ಒದಗಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾಹಿತಿ ನೀಡಿದರು. 
ಜಿಲ್ಲೆಯಲ್ಲಿ ೨೩ ವಾರಗಳಗಳ ಕಾಲ ಬೇಕಾಗುವಷ್ಟು ಮೇವು ದಾಸ್ತಾನವಿದೆ. ಯಾವುದೇ ಕೊರತೆ ಇಲ್ಲ. ಈಗಾಗಲೇ ಜಿಲ್ಲೆಯ ೧೩ ತಾಲೂಕುಗಳಲ್ಲಿ  ೧ಲಕ್ಷ ೩೪ ಸಾವಿರ ಕೆ.ಜಿ. ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.