ಜಾತಿ ಬೇಧವಿಲ್ಲದ ಜಾನಪದ ಸದಾ ಜೀವಂತ : ಬಾಳನಗೌಡ ಪಾಟೀಲ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕೊಲ್ಹಾರ : ಜಾನಪದ ಅನುಭವ ಜನ್ಯವಾದುದು. ಮಾತೃ ವಾತ್ಸಲ್ಯ ಮತ್ತು ವಿಶ್ವಭ್ರಾತೃತ್ವದಲ್ಲಿ ಬೆಳೆದು ನಿಂತಿದೆ. ಸಾರ್ವಕಾಲಿಕ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸಿದ ಭಾರತದ ಜಾನಪದ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ ಮತ್ತು ಕೊಲ್ಹಾರ ತಾಲೂಕು ಘಟಕ ಹಾಗೂ ಬಳೂತಿಯ ಭಾವಿ ಬಸವೇಶ್ವರ ಹೆಜ್ಜೆ ಮೇಳದ ಸಹಯೋಗದಲ್ಲಿ ಕೊಲ್ಹಾರ ತಾಲೂಕಿನ ಬಳೂತಿಯ ಬೀಬೀ ಫಾತಿಮಾಳ ಹತ್ತು ದಿನದ ಜಾರತ ಉತ್ಸವ ಪ್ರಯುಕ್ತ ಹಮ್ಮಿಕೊಂಡ " ಜಿಲ್ಲಾ ಮಟ್ಟದ ರಿವಾಯತ ಮತ್ತು ಹೆಜ್ಜೆಮೇಳ ಉತ್ಸವ " ಉದ್ಘಾಟಿಸಿ ಮಾತನಾಡುತ್ತ ಬದಲಾದ ಕಾಲಮಾನದಲ್ಲಿ ಭಾರತದ ಜಾನಪದ ಸಂಸ್ಕೃತಿ ಮೂಲ ರೂಪ ಕಳೆದುಕೊಳ್ಳುತ್ತಿದೆ.
ಜಾನಪದ ಸಂಸ್ಕೃತಿ ಅಳಿದರೆ ದೇಶದ ಮೌಲ್ಯ ಕಡಿಮೆಯಾಗುತ್ತಿದೆ. ಬಳೂತಿ ಗ್ರಾಮದಲ್ಲಿ ಭಾವೈಕ್ಯ ಬೆಸೆಯುವ ಈ ರಿವಾಯತ ಉತ್ಸವ ನಾಡಿಗೆ ಮಾದರಿಯಾಗಿದೆ ಎಂದರು. ಮುಂದೊಂದು ದಿನ ಬಳೂತಿ ಗ್ರಾಮ ಜಾನಪದಕ್ಕೆ ಅಗ್ರ ನೆಲೆಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಬೀಳಗಿಯ ಜನಪದ ಸಾಹಿತಿ ಸಿದ್ದಪ್ಪ ಬಿದರಿ ಜಾನಪದ ಕಲಾವಿದರಿಗೆ ಸಾಮಾಜಿಕ ಕಳಕಳಿಯಿದೆ. ಅಕ್ಷರ ಕಲಿತವರು ಸಂಸ್ಕೃತಿ ಮರೆಯುತ್ತಿದ್ದಾರೆ. ಯುವ ಜನಾಂಗ ವಿದೇಶಿ ಸಂಸ್ಕೃತಿ ಹಿಡಿದು ದೇಶ ಕೆಡಿಸುತ್ತಿದ್ದಾರೆ. ಭಾರತದ ಮೂಲ ಸಂಸ್ಕೃತಿಯಲ್ಲಿರುವ ಊಟ, ಆಟ, ಪಾಠ,ಕಲೆ,ಸಾಹಿತ್ಯ, ಕೃಷಿ,ಬದುಕು ಮತ್ತು ಸಾಮಾಜಿಕ ಸಂಬಂಧ ಕುರಿತು ಜನಪದ ಹಾಡು ಹಾಡುತ್ತಾ ಮಾತನಾಡಿದರು.
ಹಿರಿಯ ಜನಪದ ಕಲಾವಿದ ಶಂಕರಯ್ಯ ಚಿಕ್ಕಮಠ ಅಧ್ಯಕ್ಷತೆ ವಹಿಸಿ ಜಾರತ ಉತ್ಸವ ಕುರಿತು ಮಾತನಾಡಿದರು. ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಸದಸ್ಯ ಕಲಾವಿದ ಮೌಲಾಸಾಹೇಬ ಜಹಾಗೀರದಾರ, ಕೊಲ್ಹಾರ ತಾಲೂಕಾ ಕಾರ್ಯದರ್ಶಿ ಭೀಮಶಿ ಬೀಳಗಿ, ಕೂಡಗಿ ವಲಯ ಘಟಕದ ಅಧ್ಯಕ್ಷ ದುಂಡಯ್ಯ ಮಠಪತಿ ಉಪಸ್ಥಿತರಿದ್ದರು.
ಭಾವಿ ಬಸವೇಶ್ವರ ಹೆಜ್ಜೆ ಮೇಳದ ಕಲಾವಿದರು ಮತ್ತು ಬಲೂತಿಯ ಹಿರಿಯರ ಸಮ್ಮುಖದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ 120 ಕ್ಕೂ ಹೆಚ್ಚು ರಿವಾಯತ ಮತ್ತು ಹೆಜ್ಜೆಮೇಳ ಕಲಾ ತಂಡಗಳು ಎರಡು ದಿನಗಳ ಕಾಲ ಪ್ರದರ್ಶನ ನಡೆಸುವರು. ಕಲಾವಿದರಿಗೆ ಸನ್ಮಾನ ಮಾಡಿ ಅಭಿನಂದನಾ ಪತ್ರ ನೀಡಲಾಯಿತು.
ವಿಠ್ಠಲ ಲೋಕಾಪುರ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಕಲಾವಿದ ಪವಾಡೆಪ್ಪ ಗೊಳಸಂಗಿ ಸ್ವಾಗತಿಸಿದರು ಪರಸಪ್ಪ ಬಶೆಟ್ಟಿ ವಂದಿಸಿದರು.