ಸಿಂದಗಿ: ನಿಜ ಶರಣ ಅಂಬಿಗರ ಚೌಡಯ್ಯ ನವರು ಹನ್ನೆರಡನೆಯ ಶತಮಾನದ ಶರಣರಲ್ಲಿ ಅಗ್ರಗಣ್ಯರಾಗಿ ಸಮಾಜದ ಉದ್ದಗಲಕ್ಕೂ ಆಳವಾಗಿ ಬೇರೂರಿದ್ದ ಮೌಢ್ಯಾಚಾರಣೆಯ ವಿರುದ್ಧ ಧ್ವನಿ ಎತ್ತಿದ ಕ್ರಾಂತಿ ವಚನಕಾರ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಸಂಗಮೇಶ ಉಪಾಸೆ ಹೇಳಿದರು.
ಅಂಬಿಗರ ಚೌಡಯ್ಯ ನವರ 865ನೇ ಜಯಂತಿ ಪ್ರಯುಕ್ತ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಇವರ ನಿಜ ಶರಣ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಿ ಮಾತನಾಡಿ ಮೌಡ್ಯತೆಯಲ್ಲಿ ದೇವರನ್ನು ಕಾಣದೆ, ಕಪಟತೆಯ ಜೀವನ ನಡೆಸದೇ ಅಂತರಂಗ ಮತ್ತು ಬಹಿರಂಗ ಶುದ್ಧೀಕರಣವಾಗಿರಿಸಿ, ಯಾರನ್ನು ಕಡೆಗಣಿಸದೆ ಸಾಮಾನ್ಯ ಜನರ ನಡುವೆ ಅಸಾಮಾನ್ಯರಂತೆ ಬದುಕಿ ಸನ್ಮಾರ್ಗದ ದಾರಿಯಲ್ಲಿ ಸಾಗಿದವನು ಮಾತ್ರ ಯೋಗಿ ಆಗಲು ಸಾಧ್ಯ ಎಂದು ಹೇಳಿದಲ್ಲದೆ ವಚನಗಳ ಉದ್ದಕ್ಕೂ ಸಾಮರಸ್ಯ ಸಹೋದರತೆ ಸಾರಿ, ಸಮಾನತೆ ಮತ್ತು ಕಾಯಕಕ್ಕೆ ಪ್ರಾಮುಖ್ಯತೆ ನೀಡಿ, ಇದ್ದದ್ದನ್ನು ಇದ್ದ ಹಾಗೇಯೆ ಕೆಚ್ಚೆದೆ ಮತ್ತು ದಿಟ್ಟತನದಿಂದ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ, ನೇರ ನುಡಿಯ ನಿಷ್ಠುರವಾದಿ ವಚನಕಾರ ಅಂಬಿಗರ ಚೌಡಯ್ಯ ಎಂದರು.
ಡಾ.ಜ್ಯೋತಿರ್ಲಿಂಗ ಹೊನಕಟ್ಟಿ ಮಾತನಾಡಿ, ಅಂಬಿಗರ ಚೌಡಯ್ಯ ನವರು ಜನರಲ್ಲಿ ಸಮಾನತೆಯ ಬೀಜ ಬಿತ್ತಿ. ಅಸ್ಪೃಶ್ಯತೆ, ಅಸಮಾನತೆ, ಜಾತೀಯತೆ, ಲಿಂಗ ಭೇದ, ಮೇಲು ಕೀಳು, ದಬ್ಬಾಳಿಕೆ, ದೌರ್ಜನ್ಯಗಳಂತ ಹಿಂಸಾತ್ಮಕ ಕೃತ್ಯಗಳನ್ನು ತಮ್ಮ ಹರಿತವಾದ ವಚನ ಸಾಹಿತ್ಯದ ಮೂಲಕ ಕಟುವಾಗಿ ಖಂಡಿಸಿ, ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಆಚಾರ ವಿಚಾರಗಳ ಕುರಿತು ಅರಿವು ಮೂಡಿಸಿದಲ್ಲದೆ, ದೇವನೊಬ್ಬ ನಾಮ ಹಲವು ಎಂಬ ಸಂದೇಶವನ್ನು ಜಗಕ್ಕೆ ಸಾರಿದ್ದಾರೆ ಎಂದು ಹೇಳಿದರು.
ಇನ್ನೂ ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ ಗಂಗಾಮತ ಜನರು ಸ್ನೇಹ, ದಯೆ, ಕರುಣೆ, ತ್ಯಾಗ, ಮಮತೆಗೆ ವಿಶ್ವಾಸಾರ್ಹರು, ಇಂತಹ ಸಮುದಾಯದಲ್ಲಿ ಜನಿಸಿದ ಅಂಬಿಗರ ಚೌಡಯ್ಯ ನವರು ಮುಚ್ಚು ಮರೆಯಿಲ್ಲದೆ ಸ್ವಚ್ಛ ಮನಸ್ಸಿನಿಂದ 300 ಕ್ಕೂ ಅಧಿಕ ವಚನಗಳನ್ನು ರಚಿಸಿ, ಅನೇಕ ಪವಾಡಗಳನ್ನು ಮಾಡುತ್ತ, ನಂಬಿದವರ ಯೋಗಿಯಾಗಿ, ವಿಶ್ವಗುರು ಬಸವಣ್ಣನವರ ತತ್ವ ಸಿದ್ದಾಂತವನ್ನು ಒಪ್ಪಿ ಅಪ್ಪಿ ಅನುಭವ ಮಂಟಪಕ್ಕೆ ಆಗಮಿಸಿ ಬಸವಣ್ಣನವರ ಬಳಗದಲ್ಲಿ ಒಬ್ಬರಾಗಿ ಸಮ ಸಮಾಜದ ಒಳಿತಿಗಾಗಿ ಶ್ರಮಿಸಿದ ನೇರ ದಿಟ್ಟ ನುಡಿಯ ನಿಷ್ಠುರವಾದಿ ಶರಣ ಎಂದು ಹೇಳಿದರು.
ಇದೇ ವೇಳೆ ಮೌಲಾಲಿ ಆಲಗೂರ ಇವರ ಸಾಹಿತ್ಯ, ರಾಜು ಎಮ್ಮಿಗನೂರ ಇವರ ಸಂಯೋಜನೆ ಹಾಗೂ ಕನ್ನಡ ಕೋಗಿಲೆ ವಿಜೇತ ಖಾಸೀಂ ಅಲಿ ಇವರ ಗಾಯನದಲ್ಲಿ ಮೂಡಿ ಬಂದ ನಿಜ ಶರ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಲಾಯಿತು.