ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲೂ ಯೋಗ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲು ಕ್ರಮ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ರಾಜ್ಯದ ಎಲ್ಲಾ ನಗರ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಯೋಗಾಭ್ಯಾಸವನ್ನು ಒಂದು ಚಟುವಟಿಕೆಯಾಗಿ ಅಳವಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ತಿಳಿಸಿದರು.
ಅವರು ಕರ್ನಾಟಕ ಉಚ್ಚನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ವಕೀಲರ ಸಂಘ, ಪರಿವರ್ತನ ಫೌಂಡೇಷನ್, ವಾಟರ್ ಫಾರ್ ವಾಯ್ಸ್‍ಲೆಸ್ ಇವರ ಸಹಯೋಗದಲ್ಲಿ ‘ಒಂದು ಭೂಮಿ, ಆರೋಗ್ಯಕ್ಕಾಗಿ ಯೋಗ’ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಯನ್ನು ಉದ್ಘಾಟಿಸಿ ಮಾತನಾಡಿದರು.
ಯೋಗಕ್ಕೆ ಶತಮಾನಗಳ ಇತಿಹಾಸ ಹಾಗೂ ಪರಂಪರೆಯಿದೆ. ದೇಶವಿದೇಶಗಳಲ್ಲಿ ಇದು ಪ್ರಖ್ಯಾತಿ ಪಡೆದಿದೆ. ಇವರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆಯ ಕಾಲ ಯೋಗಾಭ್ಯಾಸ ಮಾಡುವುದರಿಂದ ನಾವು ಕಾಯಿಲೆಗಳಿಂದ ದೂರವಿದ್ದು ಉತ್ತಮ ಸ್ವಾಸ್ಥ್ಯ ಪಡೆದುಕೊಳ್ಳಬಹುದು ಎಂದರು. ಅಲ್ಲದೆ ದೂರದರ್ಶನದಲ್ಲಿ ದಶಕಗಳ ಹಿಂದೆ ಬರುತ್ತಿದ್ದ ಯೋಗ ಪಾಠವನ್ನು ಸ್ಮರಿಸಿದರು.
ನಂತರ, ಪರಿವರ್ತನ ಫೌಂಡೇಷನ್ ಯೋಗ ಗುರುಗಳಾದ ಎಸ್. ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರಾದ ಕೆ.ಎಸ್. ಮೌದ್ಗಲ್ ಸೇರಿದಂತೆ ಇತರ ವಕೀಲರು, ಸಿಬ್ಬಂದಿಗಳು ಯೋಗಾಭ್ಯಾಸ ನಡೆಸಿದರು.
ಅನಂತರ ವಾಟರ್ ಫಾರ್ ವಾಯ್ಸ್‍ಲೆಸ್ ಸಂಸ್ಥೆ ವತಿಯಿಂದ ಪ್ರಾಣಿ ಪಕ್ಷಿಗಳಿಗೆ ನೀರನ್ನು ಉಣಿಸುವ ಮಾರ್ಗಗಳ ಬಗ್ಗೆ ಪ್ರಾತ್ಯಕ್ಷತೆ ನೀಡಲಾಯಿತು.
ಈ ಸಂಸ್ಥೆ ದೇಶಾದ್ಯಂತ ಸುಮಾರು 1 ಲಕ್ಷಕ್ಕೂ ಹೆಚ್ಚು ನೀರಿನ ಬೌಲ್‍ಗಳನ್ನು ನೀಡಿ ಪ್ರಾಣಿ ಪಕ್ಷಿಗಳ ನೀರಿನ ದಾಹ ಇಂಗಿಸಿದೆ. ಕಾರ್ಯಕ್ರಮದಲ್ಲಿ ನೀರಿನ ಬೌಲ್‍ಗಳನ್ನು ಗಣ್ಯರಿಗೆ, ಸಭಿಕರಿಗೆ ಸಂಸ್ಥೆಯ ಸಂಸ್ಥಾಪಕರಾದ ಜೈನ್ ಸನ್ನಿ ಹಿಸ್ತಿಮಾಲ್ ಹಾಗೂ ಪ್ರಫುಲ್ ಚುನಿಲಾಲ್ ಮೌನ್ ಸಾಂಕೇತಿಕವಾಗಿ ವಿತರಿಸಿದರು.