ಮೆಕ್ಕೆಜೋಳಕ್ಕೆ ಕೀಟ ಬಾಧೆ : ನಿಯಂತ್ರಣ ಕ್ರಮಕ್ಕೆ ರೈತರಿಗೆ ಸಲಹೆ

Jul 7, 2025 - 21:14
 0
ಮೆಕ್ಕೆಜೋಳಕ್ಕೆ ಕೀಟ ಬಾಧೆ : ನಿಯಂತ್ರಣ ಕ್ರಮಕ್ಕೆ ರೈತರಿಗೆ ಸಲಹೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ :  ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈವರೆಗೆ ೯೨ ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಅಲ್ಲಲ್ಲಿ ಫಾಲ್ ಆರ್ಮಿವರ್ಮ ಕೀಟವು ಕಾಣಿಸಿಕೊಳ್ಳುತ್ತಿದ್ದು, ಮೂಲತಃ ಮೆಕ್ಕೆ ಜೋಳದ ಕೀಟವಾದರೂ ಜೋಳ, ಹತ್ತಿ, ಕಬ್ಬು, ಶೇಂಗಾ ಹಾಗೂ ಇತರೆ ಬೆಳೆಗಳನ್ನು ಬಾಧಿಸುತ್ತಿದೆ.  ಕೀಟವು ಮೆಕ್ಕೆಜೋಳದ ಸುಳಿಯಲಿ ಹಗಲುರಾತ್ರಿ ಎಲೆ ಹಾಗೂ ಬೆಳೆ ಹಾನಿ ಮಾಡುತ್ತಿದೆ. ಕೀಟ ನಿಯಂತ್ರಣಕ್ಕೆ ರೈತರು ಸಾಮೂಹಿಕ ಹತೋಟಿ ಕ್ರಮಗಳನ್ನು ಕೈಗೊಳ್ಳಲು ಜಂಟಿ ಕೃಷಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.

               ಈ ಕೀಟವು ಕಂದು ಬಣ್ಣದ ಪತಂಗವಾಗಿದ್ದು, ರೆಕ್ಕೆಯ ಅಂಚಿನಲ್ಲಿ ಬಿಳಿಯ ಪಟ್ಟಿಗಳನ್ನು ಹೊಂದಿರುತ್ತದೆ. ಇದರ ಜೀವಿತಾವಧಿ ೩೦ ರಿಂದ ೪೦ ದಿನಗಳಷ್ಟಾಗಿದ್ದು, ಸುಮಾರು ಸಾವಿರ ಮೊಟ್ಟೆಗಳನ್ನು ಇಡುವ ಶಕ್ತಿ ಹೊಂದಿದ್ದು, ೫೦ ರಿಂದ ೧೦೦ ಕಿ.ಮೀ ವರೆಗೆ ವಲಸೆ ಹೋಗುವ ಈ ಕೀಟವು, ತರಕಾರಿ ಬೆಳೆಗಳು, ಭತ್ತ, ಕಬ್ಬು, ಹತ್ತಿ ಹಾಗೂ ಜೋಳದ ಬೆಳೆಗಳನ್ನು ಬಾಧಿಸಬಹುದಾಗಿದೆ. ಇದರ ಮೊಟ್ಟೆ ಹಾಗೂ ಮರಿ ಹುಳುಗಳನ್ನು ಆರಿಸಿ ತೆಗೆಯಬೇಕು. ಮರಿಹುಳು ಕಂಡ ತಕ್ಷಣ ಶೇ.೫ರಷ್ಟು ಬೇವಿನ ಬೀಜದ ಕಷಾಯ ಸಿಂಪಡಿಸಬೇಕು. ಪ್ರತಿ ಲೀಟರ್ ನೀರಿಗೆ ೧.೦ ಮಿ.ಲೀ ಸ್ಪೆöನೆಟೋರಾಮ್, ೦.೨೫ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್, ೧.೮ ರಷ್ಟು ಎಸ್‌ಪಿ, ಅಸಿಫೇಟ್ ಮತ್ತು ಇಮಿಡಾಕ್ಲೋಪ್ರಿಡ್,  ೧ ಗ್ರಾಂ ಅಥವಾ ೦.೨೫ ಮಿ.ಲೀರಷ್ಟು ಕ್ಲೊರ‍್ಯಾಂಟ್ರಿನಿಲಿಪ್ರೋಲ್‌ಗಳನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು.                

ರಾತ್ರಿ, ತಂಪಾದ ಹೊತ್ತು ಹೆಚ್ಚು ಚಟುವಟಿಕೆಯಿಂದಿರುವ ಕಾರಣ ಕೀಟನಾಶಕದ ಮಿಶ್ರಣವನ್ನು ಬೆಳಿಗ್ಗೆ ಅಥವಾ ಸಾಯಂಕಾಲ ಸಿಂಪಡಿಸುವುದು ಉತ್ತಮ. ೧೦೦ ಮಿ.ಲೀಟರ್ ಮೊನೊಕ್ರೊಟೋಫಾಸ್ ೩೬ ಎಸ್ ಎಲ್, ೧.೫ ಕೆಜಿ ಬೆಲ್ಲ, ೨೦ ಕೆಜಿ ಅಕ್ಕಿತೌಡು ಹಾಗೂ ೩ ಲೀಟರ್ ನೀರು ಬೆರಸಿ ಈ ಮಿಶ್ರಣವನ್ನು ಎರಡು ದಿನ ಕಳಿಯಲು ಬಿಟ್ಟು ಸಂಜೆ ಸಮಯದಲ್ಲಿ ಪ್ರತಿ ಎಕರೆಗೆ ಬೆಳೆಯ ಸುಳಿಯಲ್ಲಿ ಮತ್ತು ಎಲೆಗಳ ಮೇಲೆ ಬೀಳುವಂತೆ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಎಸ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.