ಮಂಡಳಿ ಕಾಮಗಾರಿ ಪ್ರಥಮಾದ್ಯತೆ ಮೇಲೆ ಪೂರ್ಣಗೊಳಿಸಿ : ಬಿ.ಫೌಜಿಯಾ ತರನ್ನುಮ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ ಕಾಮಗಾರಿಗಳನ್ನು ಪ್ರಥಮಾದ್ಯತೆ ಮೇಲೆ ಪೂರ್ಣಗೊಳಿಸುವಂತೆ ಅನುಷ್ಠಾನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಪ್ರಗತಿಯಲ್ಲಿರುವ ೧,೮೯೭ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಮ0ಡಳಿಯಿ0ದ ೨೦೧೩-೧೪ ರಿಂದ ೨೦೨೪-೨೫ನೇ ಸಾಲಿನ ವರೆಗೆ ಕಲಬುರಗಿ ಜಿಲ್ಲೆಗೆ ೫,೬೩೩.೯೬ ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಇದರಲ್ಲಿ ೩,೭೫೪.೪೧ ಕೋಟಿ ರೂ. ಖರ್ಚು ಮಾಡಿ ೧೧,೬೫೫ ಕಾಮಗಾರಿಗಳ ಪೈಕಿ ೯,೨೪೮ ಕಾಮಗಾರಿಗಳು ಪೂರ್ಣಗೊಳಿಸಿದೆ. ಇನ್ನು ಪ್ರಾರಂಭಿಸಿದ ೫೧೦ ಕಾಮಗಾರಿಗಳನ್ನು ಕೂಡಲೆ ಶುರು ಮಾಡುವಂತೆ ಡಿ.ಸಿ. ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜಿನೀಯರಿ0ಗ್, ಕೆ.ಆರ್.ಐ.ಡಿ.ಎಲ್., ಪಿ.ಎಂ.ಜಿ.ಎಸ್.ವೈ., ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ, ಶಾಲಾ ಶಿಕ್ಷಣ ಇಲಾಖೆ, ಸಿಡಾಕ್, ಆರೋಗ್ಯ ಇಲಾಖೆ ಹಾಗೂ ಸ್ಲಮ್ ಬೋರ್ಡ್ ಇಲಾಖೆಯ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ ವಿವಿಧ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಇದ್ದರು.